ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯಬೇಕಾಗಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET PG 2021)ಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ತಿಳಿಸಿದ್ದಾರೆ.
ಈ ಹಿಂದೆ ನೀಟ್ ಪರೀಕ್ಷೆ ಏಪ್ರಿಲ್ 18 ರಂದು ನಿಗದಿಯಾಗಿತ್ತು, ಆದರೆ ಇದನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು, ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ದೇಶದಲ್ಲಿ 2ನೇ ಅಲೆ ಅಪಾಯ ಸೃಷ್ಟಿಸುತ್ತೀರುವ ಹಿನ್ನೆಲೆ ಕೇಂದ್ರ ಸರ್ಕಾರ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆ ರದ್ದುಮಾಡಿ, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ನೀಟ್ ಪರೀಕ್ಷೆಯನ್ನು ಕೂಡ ಮುಂದೂಡಿಕೆ ಮಾಡಿದೆ.