ಮಂಗಳೂರು: ಇಡೀ ದೇಶದಲ್ಲೇ ಹವಾ ಎಬ್ಬಿಸಿದ ತುಳುನಾಡ ದೈವಾರಾಧನೆ ಪರಿಚಯಿಸಿದ ಕನ್ನಡದ ಕಾಂತಾರ ಸಿನಿಮಾ ನೋಡಲು ಥಿಯೇಟರ್ಗೆ ಬಂದ ಜೋಡಿ ಮೇಲೆ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ದೂರಲಾಗಿದೆ.
ಒಂದೇ ಕೋಮಿನ ಜೋಡಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂತೋಷ್ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸುಳ್ಯದ ಖಾಸಗಿ ಕಾಲೇಜಿನ ಕೇರಳದ ಮೂಲದ ವಿದ್ಯಾರ್ಥಿ ಜೋಡಿ ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದ ವೇಳೆ ಯುವಕ ಮತ್ತು ಯುವತಿಯನ್ನು ಗುಂಪೊಂದು ತರಾಟೆಗೆ ತೆಗೆದುಕೊಂಡಿತ್ತು. ಮುಸ್ಲಿಂ ಯುವಕ ಮತ್ತು ಹಿಜಾಬ್ ಹಾಕಿದ್ದ ಯುವತಿ ಸಂತೋಷ್ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಯುವಕ ಪಾರ್ಕಿಂಗ್ನಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಸ್ಥಳೀಯ ಕೆಲ ಮುಸ್ಲಿಂ ಯುವಕರು ತರಾಟೆ ಶುರು ಮಾಡಿದ್ದರು. ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಸದ್ಯ ಹಲ್ಲೆಗೆ ಯತ್ನಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಯುವಕರು ಎಚ್ಚರಿಸಿದ ಬಳಿಕ ವಿದ್ಯಾರ್ಥಿಗಳು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ..


























