ಬಂಟ್ವಾಳ: ತಮಗೆ ಸೇರಿದ ಪಟ್ಟ ಜಮೀನಿಗೆ ಸಂಬಂಧಿಸಿ ಅಳವಡಿಸಿದ ಕಬ್ಬಿಣದ ಗೇಟನ್ನು ಪುತ್ತಿಲ ಗ್ರಾಮದ ಬರಮೇಲು ನಿವಾಸಿ ಚಂದ್ರಶೇಖರ ರವರ ಪುತ್ರ ಕುಲದೀಪ್ ಶೆಟ್ಟಿ ಎಂಬವರು ಅತಿಕ್ರಮಣ ಮಾಡಿ ಕಳವು ಮಾಡಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆದರೇ ಇದೀಗ ಇಡೀ ಪ್ರಕರಣದ ಸತ್ಯಾಂಶವನ್ನು ಮರೆಮಾಚಿ ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಜಮೀನಿನ ಮಾಲಕಿ ಭವಾನಿ ವಸಂತ ಗೌಡ ಅವರು ಆರೋಪಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ಡಿ.2 ರಂದು ತಾನು ತನ್ನ ಪತಿ ವಸಂತ ಗೌಡ ಹಾಗೂ ಕೆಲಸದ ಆಳು ಧರ್ಣಪ್ಪ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಂಜೆ 4 ಗಂಟೆ ವೇಳೆ ಚಂದ್ರಶೇಖರ ಶೆಟ್ಟಿ ಮತ್ತು ಕುಲದೀಪ್ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ರಾಜ್ಯ ಉಪಾಧ್ಯಕ್ಷರ ವಾಹನ ಜೊತೆ ಹಸಿರು ಶಾಲು ದಾರಿಗಳು ಆಗಮಿಸಿ ಕಬ್ಬಿಣದ ಗೇಟನ್ನು ಮುರಿದು ಪಿಕಪ್ ವಾಹನದಲ್ಲಿ ತುಂಬಿಸಿ ಸಾಗಿಸಿದ್ದಾರೆ.

ಈ ವೇಳೆ ನಾವು ಅವರನ್ನು ನಿಲ್ಲಿಸುವಂತೆ ಸೂಚಿಸಿದರು, ಅವರು ವಾಹನ ನಿಲ್ಲಿಸದೆ ರಭಸದಲ್ಲಿ ಹೋಗಿದ್ದಾರೆ. ಇದೇ ವೇಳೆ ಈ ಘಟನೆಯ ಛಾಯಾಚಿತ್ರವನ್ನು ಸ್ಥಳೀಯರು ಸೆರೆ ಹಿಡಿಯಲಾಗಿದೆ. ತಕ್ಷಣ ಈ ಬಗ್ಗೆ 112 ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಘಟನೆಯ ಬಗ್ಗೆ ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದೇವೆ. ಮರುದಿನ ಪೊಲೀಸರು ಕುಲದೀಪ್ ಶೆಟ್ಟಿ ರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳವನ್ನು ಮಹಜರು ಮಾಡಿರುತ್ತಾರೆ. ಈ ಬಗ್ಗೆ ಪೊಲೀಸರು ನಮ್ಮನ್ನು ಕುಲದೀಪ್ ಶೆಟ್ಟಿ ಅವರ ಮನೆಗೆ ಕರೆದುಕೊಂಡು ಹೋದಾಗ ಆತ ತನ್ನ ಮನೆಯ ಅಂಗಳದಲ್ಲಿ ಗೇಟನ್ನು ತೋರಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಗುರುತಿಸಿದ್ದೇವೆ. ಕುಲದೀಪ್ ಶೆಟ್ಟಿ ಈ ಜಾಗದಲ್ಲಿ ಗೇಟ್ ಇಲ್ಲವೆಂದು ಕೋರ್ಟ್ ಗೆ ಸುಳ್ಳು ಅಫಿದಾವಿತ್ ಸಲ್ಲಿಸಿದ್ದು, ಇದರ ಬಗ್ಗೆ ಮರುದಿನ ಅಂದರೆ ಡಿ.3 ರಂದು ನಮಗೆ ರಿಜಿಸ್ಟರ್ ನೋಟೀಸ್ ಬಂದಿರುತ್ತದೆ. ಕುಲದೀಪ್ ವಕೀಲ ವೃತ್ತಿಯಲ್ಲಿದ್ದರು, ಕೋರ್ಟ್ ಗೆ ಹಾಗೂ ಸಹೋದ್ಯೋಗಿ ವಕೀಲರಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಭವಾನಿವಸಂತ ಗೌಡ ಆರೋಪಿಸಿದ್ದಾರೆ.
ಕುಲದೀಪ್ ಶೆಟ್ಟಿ ಹತ್ತಿಪ್ಪತ್ತು ಜನರ ಜೊತೆ ಬಂದು ಗೇಟ್ ಕಳವು ಮಾಡಿದ್ದು, ಈ ಘಟನೆಯಿಂದ ನಾವು ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ, ನಮಗೆ ನ್ಯಾಯೋಚಿತ ದಾರಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜೀವನ ಸಾಗಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ಈಗಾಗಲೇ ನಾವು ಈ ಪ್ರಕರಣದ ಬಗ್ಗೆ ಕಾನೂನು ಹೋರಾಟ ಪ್ರಾರಂಭಿಸಿದ್ದು , ಅದರ ಜೊತೆಗೆ ಸತ್ಯ ತೀರ್ಮಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಕಾನತ್ತೂರ ದೈವದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಸಂತ ಗೌಡ, ರತ್ನಾಕರ, ಜಗದೀಶ್ ಹಾಗೂ ರಾಜೇಂದ್ರ ಜೈನ್ ಉಪಸ್ಥಿತರಿದ್ದರು.
























