ನವದೆಹಲಿ : ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ಲಿಂಕ್‌ಗಳನ್ನು ಕ್ಲಿಕ್ ಮಾಡಿ ನೋಡುವ ಹವ್ಯಾಸ ಹಲವರಿಗಿದೆ. ಆದರೆ ಅದು ಅಧಿಕೃತ ಲಿಂಕ್ ಹೌದೇ ಎಂದು ನೋಡಿಕೊಳ್ಳುವುದು ನಮ್ಮ ಖಾಸಗಿ ಮಾಹಿತಿಯ ರಕ್ಷಣೆಗಾಗಿ ಬೇಕಾದ ಎಚ್ಚರಿಕೆ. ಯಾವುದೇ ಲಿಂಕ್ ಕ್ಲಿಕ್ ಮಾಡುವವರು ಎಚ್ಚರದಲ್ಲಿರುವುದು ಅತ್ಯಗತ್ಯ. ಯಾಕೆಂದರೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಪಿಂಕ್ ವಾಟ್ಸಾಪ್ ಲಿಂಕ್.
ಈ ಪಿಂಕ್ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಈಗಾಗಲೇ ಹಲವಾರು ಮಂದಿ ತಮಗೆ ತಿಳಿಯದೆ ತಮ್ಮ ಹೆಸರಿನಲ್ಲಿ ಎಲ್ಲಾ ಗ್ರೂಪ್‌ಗಳಿಗೆ ಸೆಂಡ್ ಆದ ಲಿಂಕ್ ನೋಡಿ ಗಾಬರಿಗೊಂಡಿದ್ದಾರೆ. ಒಂದು ಕ್ಲಿಕ್‌ನಲ್ಲೇ ಇಂಟರ್ನೆಟ್‌ನಲ್ಲಿ ಪ್ರಭಾವ ಸೃಷ್ಟಿ ಮಾಡುವ ಉದ್ದೇಶವನ್ನು ಹೊಂದಿರುವ ಕೆಲವು ಹ್ಯಾಕರ್‌ಗಳು ಇಂತಹ ಲಿಂಕ್ ತಯಾರಿಸಿದ್ದು ಈ ಪಿಂಕ್‌ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಈ ಮೆಸೇಜ್ ಅವರ ವಾಟ್ಸಾಪ್‌ನಲ್ಲಿರುವ ಎಲ್ಲಾ ಗ್ರೂಪ್‌ಗಳಿಗೆ ರವಾನೆಯಾಗುತ್ತದೆ.
ಇನ್ನು ಮೂರು ವರ್ಷಗಳ ಹಿಂದೆ ಈ ಲಿಂಕ್ ಪಿಂಕ್ ಬದಲಿಗೆ ಗ್ರೀನ್ ಎಂದೂ ಹರಿದಾಡುತ್ತಿತ್ತು. ಈಗಿನ ಈ ಪಿಂಕ್‌ವಾಟ್ಸಾಪ್ ಲಿಂಕ್‌ನಂತೆ ನೀವು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಎಲ್ಲಾ ಗ್ರೂಪ್‌ಗಳಿಗೆ ಮೆಸೇಜ್ ಫಾರ್ವಡ್ ಆಗುತ್ತಿತ್ತು. ಈ ಪಿಂಕ್ ವಾಟ್ಸಾಪ್ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ”ನಾವು ಈವರೆಗೂ ಬಣ್ಣ ಬದಲು ಮಾಡುವ ಯಾವುದೇ ಆಯ್ಕೆಯನ್ನು ನೀಡಿಲ್ಲ. ಇನ್ನು ಮುಂದೆ ನೀಡಲೂ ಬಹುದು” ಎಂದು ಹೇಳಿದೆ. ಇನ್ನು ಕೆಲವು ಲಿಂಕ್‌ಗಳು ನಮ್ಮ ಖಾಸಗಿ ಮಾಹಿತಿಗಳನ್ನೂ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಯಾವುದೇ ಅನಧಿಕೃತ ಲಿಂಕ್ ಕ್ಲಿಕ್ ಮಾಡುವಾಗ ಎಚ್ಚರವಾಗಿರಬೇಕಾದದ್ದು ಅಗತ್ಯ.