ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯ ತಯಾರಿಯ ಕುರಿತು ಕಾರ್ಯಗಾರ ನಡೆಸಲಾಯಿತು.


ಜೇಸಿ ಶಾಲೆಯ ಸಭಾಭವನ ಜೇಸಿ ಪೆವಿಲಿಯನ್ ನಲ್ಲಿ ರೋಟರಿ ಕ್ಲಬ್ ವಿಟ್ಲ ಹಾಗೂ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಹಯೋಗದೊಂದಿಗೆ ‘ಪರೀಕ್ಷೆ ಒಂದು ಹಬ್ಬ- ಸಂಭ್ರಮಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಮಾನವ ಸಂಪನ್ಮೂಲ ತರಬೇತುದಾರರು, ಪರಿವರ್ತನಾ ಸಂಸ್ಥೆ, ಮೈಸೂರು ಇದರ ಸಂಸ್ಥಾಪಕರಾದ ಚೇತನ್ ರಾಮ್ ಆರ್. ವಿ ಇವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಎಣ್ಣೆ ಬತ್ತಿಯ ದೀಪಗಳಾಗಬೇಕು, ದೀಪದಿಂದ ದೀಪ ಹಚ್ಚುವ ಹಾಗೆ ಜ್ಞಾನದೀಪದ ವ್ಯಕ್ತಿತ್ವ ನಮ್ಮದಾಗಬೇಕೆಂದು ಹೇಳಿದರು. ಸುಮಾರು 2 ಗಂಟೆಗಳ ಕಾಲ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿಯನ್ನು ಹೆಚ್ಚಿಸುವಂತಹ ಮೆದುಳಿನ ನಿರ್ವಹಣಾ ತಂತ್ರವನ್ನು ಪರಿಣಾಮಕಾರಿಯಾಗಿ ತಿಳಿಸಿದರು.
ವಿಟ್ಲ ಕ್ಲಸ್ಟರ್ ನ 8 ಪ್ರೌಢ ಶಾಲೆಗಳ ಸುಮಾರು 550 ವಿದ್ಯಾರ್ಥಿಗಳು ಇದರ ಸದುಪಯೋಗಪಡೆಸಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್.ಎನ್. ಕೂಡೂರು ರವರು ವಹಿಸಿ ಇಂತಹ ತರಬೇತಿ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದುದು ಎಂದು ತರಬೇತಿ ಶಿಬಿರವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಲ್ಲಾ ರೋಟರಿ ಗವರ್ನರ್ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದು ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚೆಚ್ಚು ಮೂಡಿಬಂದು ವಿದ್ಯಾರ್ಥಿಗಳಿಗೆ ದೊರಕಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು, ವಿಠಲ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ರೋಟರಿ ಕ್ಲಬ್ ವಿಟ್ಲದ ಉಪಾಧ್ಯಕ್ಷರಾದ ಕಿರಣ್ ಕುಮಾರ್, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ರೋಟರಿ ಕ್ಲಬ್ ವಿಟ್ಲ ಇದರ ಅಧ್ಯಕ್ಷರಾದ ಪ್ರಕಾಶ್ ನಾಯಕ್, ಸಂಸ್ಥೆ ಪ್ರಾಂಶುಪಾಲರಾದ ಜಯರಾಮ ರೈ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಸಂಯೋಜಿಸಲು ಸಹಕರಿಸಿದ ತೌಸಿಫ್, ಬೇದುಲ್ಲ ,ಕ್ಷೇತ್ರ ಶಿಕ್ಷಣಧಿಕಾರಿಗಳಾದ ಜ್ಞಾನೇಶ್ವರ್, ಮಾಲತಿ, ಪ್ರಾಂಶುಪಾಲರಾದ ಜಯರಾಮ ರೈ ಹಾಗೂ ಕಿರಣ ಕುಮಾರ್ ರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಆಡಳಿತ ಅಧಿಕಾರಿ ರಾಧಾಕೃಷ್ಣ ಉಪಸ್ಥಿತರಿದ್ದರು. ಜೇಸಿ ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು ಹಾಗೂ ರೋಟರಿ ಕ್ಲಬ್ ನ ರೊಟೇರಿಯನ್ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.


























