ಪುಂಜಾಲಕಟ್ಟೆ: ಸಹಕಾರಿ ಸಂಘದಲ್ಲಿ ವಂಚನೆ ನಡೆಸಿದ ವಿಚಾರವಾಗಿ ಸಿಬ್ಬಂದಿಯನ್ನು ಸಂಘದ ಸದಸ್ಯರೋರ್ವರು ತರಾಟೆಗೆ ತೆಗೆದುಕೊಂಡು ತಳ್ಳಿರುವ ಘಟನೆ ಬುಧವಾರ ಸಂಘದ ಅವರಣದಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಟ್ವಾಳ ತಾಲೂಕಿನ ಕಾವಳ ಮೂಡೂರು ವ್ಯ.ಸೇ.ಸ. ಸಂಘದಲ್ಲಿ ಸದಸ್ಯ ಗ್ರಾಹಕರನ್ನೇ ವಂಚಿಸಿ ಸಾಲ ಮಾಡಲಾಗಿದೆ ಎಂಬ ಆರೋಪದಲ್ಲಿ ಸದಸ್ಯ ಗ್ರಾಹಕರೋರ್ವರು ಆಕ್ರೋಶಿತರಾಗಿ ಸಂಘದ ಹೊರ ಭಾಗದ ಬಾಗಿಲಲ್ಲಿ ನಿಂತಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ನಮ್ಮ ಹೆಸರಲ್ಲಿ ಲಕ್ಷಾಂತರ ಸಾಲ ಪಡೆದು ನಮ್ಮನ್ನು ವಂಚಿಸಿದ್ದಿಯಾ ಈ ಸಾಲ ಯಾವಾಗ ಮರುಪಾವತಿ ಮಾಡುತ್ತಿ ಎಂದು ಆಕ್ರೋಶ ಭರಿತರಾಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿ ಎಳೆದಾಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗದ ಕುರಿತಾಗಿ ಹೈಕೋರ್ಟ್ ಆದೇಶದಂತೆ ವಿಚಾರಣೆ ನಡೆಸುತ್ತಿದ್ದ ಸಹಕಾರ ಸಂಘದ ಅಧಿಕಾರಿ ಮಧ್ಯಪ್ರವೇಶಿಸಿ ವಿಚಾರಣೆಗಾಗಿ ಬಂದಿರುವ ಹಿನ್ನೆಲೆಯಲ್ಲಿ ತನ್ನ ಮುಂದೆ ಹೇಳಿಕೆ ನೀಡುವಂತೆ ಸೂಚಿಸಿದ್ದು, ಸದಸ್ಯ ಗ್ರಾಹಕ ವಿಚಾರಣಾಧಿಕಾರಿ ಬಳಿ ತೆರಳಿದರು ಎಂದು ತಿಳಿದು ಬಂದಿದೆ..
























