ಕಾರ್ಕಳ : ಮೆಹಂದಿಗೆ ಹೋಗಿದ್ದ ಸಂದರ್ಭ ಮನೆಯ ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯ ಗೋದ್ರೆಜ್‌ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್ (34) ಹಾಗೂ ಸಹಕರಿಸಿದ ಕಲ್ಯಾದ ನಿವಾಸಿ ಶಿಬಾ (39)ಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್ ಆಂಚನ್ ಅವರ ಮನೆಯಲ್ಲಿ ಡಿ.3 ರಂದು ಕಳ್ಳತನ ನಡೆದಿತ್ತು.
ಅಂದು ಮನೆಯ ಗೋದ್ರೆಜ್ ನಲ್ಲಿ ಇರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಬಂಧಿತರಾದ ಇಬ್ಬರು ಆರೋಪಿ ಗಳಿಂದ ಕಳ್ಳತನವಾಗಿದ್ದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಪ್ರಸಾದ್ (ಪಚ್ಚು) ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಹಾಕೆ ಮಚ್ಚೀಂದ್ರ, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ ರವರ ನಿರ್ದೇಶನದಂತೆ ಕಾರ್ಕಳ ಉಪವಿಭಾಗದ ಡಿ.ವೈ,ಎಸ್.ಪಿ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ತೇಜಸ್ವಿ ಟಿ ಐ ಮತ್ತು ಸಿಬ್ಬಂದಿಯವರಾದ ಗಿರೀಶ್, ಪ್ರಶಾಂತ್, ವಿಶ್ವನಾಥ್, ಸುಂದರ್, ವಿದ್ಯಾ, ಗಣೇಶ್ ರೆಡ್ಡಿ, ರುಕ್ಮಿಣಿ, ಶ್ಯಾಮ್, ಮಹಂತೇಶ, ಈರಣ್ಣ, ಆಶೋಕ್ ಪಡುಬಿದ್ರೆ ಮತ್ತು ಸತೀಶ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಎಸ್.ಪಿ ರವರ ಕಛೇರಿಯ ಸಿಬ್ಬಂದಿಯವರಾದ ಶಿವಾನಂದ ಹಾಗೂ ದಿನೇಶ್ ರವರು ಸಹಕರಿಸಿದ್ದಾರೆ..
























