ಕಾಸರಗೋಡು: ವಿದ್ಯಾನಗರ ಠಾಣೆ ವ್ಯಾಪ್ತಿಯ 19ರ ಹರೆಯದ ಯುವತಿಯನ್ನು ಮಾದಕ ವಸ್ತು ನೀಡಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಪಟ್ಲ ನಿವಾಸಿ ಜೆ. ಶೈನಿತ್ ಕುಮಾರ್ (30), ಉಳಿಯತ್ತಡ್ಕದ ಕ್ವಾಟ್ರರ್ಸ್‌ನಲ್ಲಿ ವಾಸಿಸುತ್ತಿರುವ ಎನ್. ಪ್ರಶಾಂತ್ (43) ಮತ್ತು ಉಪ್ಪಳ ಸಮೀಪ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ (27)ಯನ್ನು ಕಾಸರಗೋಡು ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಪಿ. ಚಂದ್ರಿಕಾ ನೇತೃತ್ವದ ತಂಡ ಬಂಧಿಸಿದೆ. ಇವರಿಗೆ ಮಧ್ಯವರ್ತಿಯಾಗಿದ್ದ ಕಾಂಞಂಗಾಡ್ ನಿವಾಸಿ ಮಹಿಳೆಯೋರ್ವಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವತಿಗೆ ಆಮಿಷ ತೋರಿಸಿದ ಈ ತಂಡ ಈ ಕೃತ್ಯ ನಡೆಸಿದೆ. ನೆರೆಮನೆಯ ಯುವಕ ಪ್ರೀತಿಸುವ ನಾಟಕವಾಡಿ ಬಳಿಕ ವಿವಾಹವಾಗುವ ಭರವಸೆ ನೀಡಿ ವಿವಿಧೆಡೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಇದಲ್ಲದೆ ಮಧ್ಯವರ್ತಿಯಾದ ಮಹಿಳೆ ಮೂಲಕ ಇತರರಿಗೂ ಯುವತಿಯನ್ನು ಒಪ್ಪಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಕಾಸರಗೋಡು, ಮಂಗಳೂರು, ಚೆರ್ಕಳ, ತೃಶ್ಯೂರು ಮೊದಲಾದೆಡೆಯ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿ ಅತ್ಯಾಚಾರ ನಡೆಸಲಾಗಿದೆ. ಇದರಿಂದ ಯುವತಿಗೆ ಆರೋಗ್ಯ ಸಮಸ್ಯೆ ತಲೆದೋರಿದ್ದು, ಆಸ್ಪತ್ರೆಗೆ ದಾಖಲಾದ ಸಂದರ್ಭ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಅತ್ಯಾಚಾರದ ಮಾಹಿತಿಗಳು ಹೊರಬಿದ್ದಿವೆ. ಆ ಬಳಿಕ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದರು. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಶೀಘ್ರವೇ ಅವರ ಬಂಧನವೂ ಆಗಲಿದೆ ಎಂದು ತಿಳಿದು ಬಂದಿದೆ.

























