ಉಪ್ಪಿನಂಗಡಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿಯೋರ್ವರು ನೇತ್ರಾವತಿ ನದಿಯಲ್ಲಿ ನೀರು ಪಾಲಾದ ಘಟನೆ ಮುಗೇರಡ್ಕದಲ್ಲಿ ಡಿ.26 ರಂದು ಸಂಜೆ ನಡೆದಿದ್ದು, ಮೃತದೇಹವು ಇಂದು ಪತ್ತೆಯಾಗಿದೆ.

ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ಧನ (40) ನೀರುಪಾಲಾದ ವ್ಯಕ್ತಿ.

ಜನಾರ್ಧನ ಹಾಗೂ ಮೊಗ್ರು ಗ್ರಾಮದ ಬೋಲೋಡಿ ನಿವಾಸಿ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬಲೆ ಹಾಕಲು ಬಂದಿದ್ದರು. ಈ ವೇಳೆ ಜನಾರ್ಧನ ಅವರು ನೀರು ಪಾಲಾಗಿದ್ದಾರೆ. ಆದರೇ ಜೊತೆಗಿದ್ದ ಮಹೇಶ್ ಈ ಸಂದರ್ಭ ಯಾರ ಸಹಾಯಕ್ಕೂ ಕೂಗದೆ ಅವರನ್ನು ಬಿಟ್ಟು ತನ್ನ ಪಾಡಿಗೆ ವಾಪಸ್ ಬಂದಿದ್ದರು ಎನ್ನಲಾಗಿದೆ.

ನೀರಿಗೆ ಬಿದ್ದ ವಿಷಯ ತಡವಾಗಿ ಬೆಳಕಿಗೆ ಬಂದ ಕಾರಣ ರಾತ್ರಿ ನೀರು ಪಾಲಾದವರ ಹುಡುಕಾಟ ಆರಂಭವಾಗಿತ್ತು. ಉಪ್ಪಿನಂಗಡಿ ಪೊಲೀಸರು ಮತ್ತು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದು, ಸ್ಥಳೀಯರಲ್ಲಿ ಮತ್ತು ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡರು ಎಂದು ವರದಿಯಾಗಿದೆ..





























