ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31 ಮತ್ತು ಜ.1ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ.
ನೋಂದಾಯಿತ/ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ನಿಯಮಗಳಿಗೆ ಒಳಪಟ್ಟು ರಾತ್ರಿ 12.30ರ ವರೆಗೆ ಸಂಭ್ರಮಾಚರಣೆಗೆ ಅನುಮತಿ ನೀಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಧ್ವನಿ ವರ್ಧಕ/ವಿದ್ಯುನ್ಮಾನ ಉಪಕರಣಗಳನ್ನು ಮತ್ತು ಶಬ್ದ ಉಂಟುಮಾಡುವ ಉಪಕರಣಗಳನ್ನು ರಾತ್ರಿ 10ರ ಬಳಿಕ ಬಳಸುವಂತಿಲ್ಲ. ನಿಯಮಗಳಿಗೆ ಒಳಪಟ್ಟು ಕಾರ್ಯಕ್ರಮವನ್ನು ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವಂತೆ ಆದೇಶಿಸಲಾಗಿದೆ.
ಸಭಾಂಗಣ, ತೆರೆದ ಸ್ಥಳ/ಹೊರಾಂಗಣ ಪ್ರದೇಶಗಳಾದ ಕಲ್ಯಾಣ ಮಂಟಪ, ಸಭಾ ಭವನ, ಸರ್ವೀಸ್ ಅಪಾರ್ಟ್‌ಮೆಂಟ್, ಕಡಲ ತೀರ, ಹೋಂಸ್ಟೇ, ಮಾಲ್ ಇತ್ಯಾದಿ ತೆರೆದ ಪ್ರದೇಶಗಳಲ್ಲಿ ಡಿಜೆ/ಡಾಲ್ಬಿ ಡ್ಯಾನ್ಸ್‌ಗಳನ್ನು ನಡೆಸುಂತಿಲ್ಲ. ವಿಶೇಷ ಪಾರ್ಟಿ, ಇತ್ಯಾದಿ ಆಯೋಜಿಸುವ ಮುನ್ನ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆ/ಗ್ರಾಮೀಣ ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು.
ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವ ಮೇಲ್ವಿಚಾರಕರು/ಆಯೋಜಕರು ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಮತ್ತು ಸರಕಾರದ ನಿಯಮಾವಳಿಗೆ ಒಳಪಟ್ಟು ಕ್ರಮ ಕೈಗೊಳ್ಳಬೇಕು. ದಿನನಿತ್ಯ ನಡೆಯುವ ಕ್ಲಬ್/ಪಬ್/ರೆಸ್ಟೋರೆಂಟ್‌ಗಳ ದೈನಂದಿನ ವ್ಯವಹಾರ ನಡೆಸಲು ಹಾಗೂ ಪರ್ಮಿಟ್‌ನಂತೆ ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು.
ಅಧಿಕೃತ/ನೋಂದಾಯಿತ ಕೇಂದ್ರಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜ ಘಾತಕ ಶಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ, ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆ, ಪಾಲಿಕೆಯ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳ ಗಸ್ತು ಪಡೆಯನ್ನು ರಚಿಸಲಾಗಿದೆ.
ಮಂಗಳೂರು ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಎಲ್ಲ ಸರ್ವಿಸ್ ಅಪಾರ್ಟ್‌ಮೆಂಟ್, ಹೊಟೇಲ್, ಪಬ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರ ಸಭೆ ಕರೆದು ಹೊಸ ವರ್ಷ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ..

























