ಬ್ರೆಸಿಲಿಯಾ: ವಿಶ್ವ ಫುಟ್‌ಬಾಲ್ ನ ಸಾರ್ವಕಾಲಿಕ ಆಟಗಾರ ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯದಿಂದ ನಿಧನರಾದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ತನ್ನ 16ನೇ ವಯಸ್ಸಿನಲ್ಲಿ ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪೀಲೆ 77 ಗೋಲುಗಳನ್ನು ಗಳಿಸಿದ್ದಾರೆ. ಎಲ್ಲಾ ಕ್ಲಬ್‌ಗಳು ಸೇರಿದಂತೆ ಒಟ್ಟು 840 ಪಂದ್ಯಗಳನ್ನು ಆಡಿರುವ ಪೀಲೆ 775 ಗೋಲು ಬಾರಿಸಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಪೀಲೆ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದಾರೆ.