ನವದೆಹಲಿ: ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ದ ಅಂಕಿಅಂಶಗಳ ಪ್ರಕಾರ ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು ದಾಖಲೆಯ ಏರಿಕೆ ಆಗಿದೆ. ನವೆಂಬರ್‌ನಲ್ಲಿ ಇದು ಶೇಕಡಾ 8 ಆಗಿತ್ತು.
ನಿರುದ್ಯೋಗ ದರವು ಸೆಪ್ಟೆಂಬರ್‌ನಲ್ಲಿ ಶೇಕಡಾ 6.43 ಮತ್ತು ಆಗಸ್ಟ್‌ನಲ್ಲಿ ಶೇಕಡಾ 8.28 ರಷ್ಟಿತ್ತು ಎಂದು ಅಂಕಿ ಅಂಶಗಳು ಹೇಳಿವೆ. ನಗರದಲ್ಲಿ ನಿರುದ್ಯೋಗ ದರ ಶೇಕಡಾ 10 ರಷ್ಟಿದ್ದರೆ, ಡಿಸೆಂಬರ್‌ನಲ್ಲಿ ಗ್ರಾಮೀಣ ನಿರುದ್ಯೋಗವು ಶೇಕಡಾ 7.5 ರಷ್ಟಿತ್ತು. ರಾಜ್ಯವಾರು ನೋಡುವುದಾದರೆ ಡಿಸೆಂಬರ್‌ನಲ್ಲಿ ಹರ್ಯಾಣದಲ್ಲಿ ನಿರುದ್ಯೋಗವು ಅತ್ಯಧಿಕವಾಗಿದ್ದು 37.4 ಶೇಕಡಾ ಇದೆ. ಅದೇ ವೇಳೆ ರಾಜಸ್ಥಾನದಲ್ಲಿ 28.5 ಶೇಕಡಾ, ದೆಹಲಿ ಶೇಕಡಾ 20.8, ಬಿಹಾರ ಶೇಕಡಾ 19.1 ಮತ್ತು ಜಾರ್ಖಂಡ್ ಶೇಕಡಾ 18 ರಷ್ಟಿದೆ.
ನಿರುದ್ಯೋಗ ದರ ಏರಿಕೆಯು ಡಿಸೆಂಬರ್‌ನಲ್ಲಿ ಶೇಕಡಾ 40.48 ರಷ್ಟು ಕಾರ್ಮಿಕ ಭಾಗವಹಿಸುವಿಕೆಯ ದರದೊಂದಿಗೆ ಗಮನಾರ್ಹ ಜಿಗಿತವಾಗಿದೆ ಎಂದು ಸಿಎಂಐಇ ಎಂ.ಡಿ. ಮಹೇಶ್ ವ್ಯಾಸ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಅತ್ಯಂತ ಮುಖ್ಯವಾಗಿ, ಉದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 37.1 ಕ್ಕೆ ಏರಿದೆ, ಇದು ಜನವರಿ 2022 ರಿಂದ ಮತ್ತೊಮ್ಮೆ ಅತ್ಯಧಿಕವಾಗಿದೆ ಎಂದು ವ್ಯಾಸ್ ಹೇಳಿದರು. ಜೂನ್ ತ್ರೈ ಮಾಸಿಕದಲ್ಲಿ ಶೇಕಡಾ 7.6 ರಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರುದ್ಯೋಗವು ಶೇಕಡಾ 7.2 ಕ್ಕೆ ಇಳಿದಿದೆ ಎಂದು ನವೆಂಬರ್‌ನಲ್ಲಿ ಎನ್‌ಎಸ್‌ಒ ಡೇಟಾ ಬಹಿರಂಗಪಡಿಸಿದೆ..




























