ವಿಜಯಪುರ: ನಡೆದಾಡುವ ದೇವರು ಎಂದು ಕರೆಯಲ್ಪಡುವ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಜ.2 ರಂದು ದೈವಾಧೀನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ವೈದ್ಯರು ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಚಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಯ ವೈದ್ಯರ ತಂಡ ಸ್ವಾಮೀಜಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರು.
ವೈಕುಂಠ ಏಕಾದಶಿಯ ಪುಣ್ಯ ದಿನದಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದೇಶ್ವರ ಶ್ರೀಗಳು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸದ್ಯ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಹೂಗಳಿಂದ ಅಲಂಕಾರ ಗೊಂಡಿರುವ ತೆರೆದ ವಾಹನದಲ್ಲಿ ಸೈನಿಕ ಶಾಲೆಯ ಆವರಣಕ್ಕೆ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರ ಆಗಮಿಸಿದ್ದು, ಸೈನಿಕ ಶಾಲೆಯ ಆವರಣದಲ್ಲಿ ಹಾಕಲಾಗಿರುವ ವೇದಿಕೆಯಲ್ಲಿ ಶ್ರೀಗಳ ಪಾರ್ಥಿವ ಶರೀರ ಇಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಖ್ಯದ್ವಾರದ ಮೂಲಕ ಆಗಮಿಸಿ 2ನೇ ಗೇಟ್‌ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಗರೋಪಾದಿಯಲ್ಲಿ ಬೆಳಂಬೆಳಗ್ಗೆ ಭಕ್ತರ ದಂಡು ಹರಿದು ಬರುತ್ತಿದೆ. ನಸುಕಿನ ಜಾವವೇ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಕಿದ ಕಾರಿಡಾರ್ ಸಂಪೂರ್ಣ ಭರ್ತಿಯಾಗಿದೆ.
ವಿಜಯಪುರ ಜಿಲ್ಲಾಡಳಿತ ವತಿಯಿಂದ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಧಾನಮ್ಮನವರ, ವರಿಷ್ಠಾಧಿಕಾರಿ ಹೆಚ್.ಡಿ.ಆನಂದ ಕುಮಾರ್ ಗೌರವ ಸಮರ್ಪಿಸಿದ್ದಾರೆ.




























