ಮಂಗಳೂರು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪಿಎ ಹೆಸರಿನಲ್ಲಿ ನಕಲಿ ವ್ಯಕ್ತಿಯೋರ್ವ ಮೊಬೈಲ್ ಕರೆ ಮತ್ತು ಸಂದೇಶ ಕಳುಹಿಸಿರುವ ಬಗ್ಗೆ ಶಾಸಕ ಯು.ಟಿ.ಖಾದರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಜ.2ರಂದು ಮಧ್ಯಾಹ್ನ ಮೊಬೈಲ್ ಸಂಖ್ಯೆಯಿಂದ ಎರಡು ಬಾರಿ ಕರೆ ಬಂದಿತ್ತು. ಸಭೆಯೊಂದರಲ್ಲಿ ಭಾಗವಹಿಸಿದ್ದರಿಂದ ಕರೆ ಸ್ವೀಕರಿಸಿರಲಿಲ್ಲ. ಸಭೆ ಮುಗಿಸಿ ಮೊಬೈಲ್ ನೋಡುವಾಗ ಸಂದೇಶವೊಂದು ಬಂದಿತ್ತು. ಅದರಲ್ಲಿ “ಕಾನಿಷ್ಕಾ ಸಿಂಗ್, ರಾಹುಲ್ ಗಾಂಧಿ ಪಿಎ ಕರೆ ಮಾಡಿ” ಎಂಬುದಾಗಿ ಇತ್ತು. ಟ್ರೂ ಕಾಲರ್ ಮೂಲಕ ಪರಿಶೀಲಿಸಿದಾಗ ಆ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೆಸರಿನಲ್ಲಿ ಸೇವ್ ಮಾಡಿರುವುದು ತಿಳಿಯಿತು. ಈ ಬಗ್ಗೆ ಮಾಹಿತಿ ತಿಳಿದಾಗ ಇದು ನಕಲಿ ವ್ಯಕ್ತಿಯ ಹೆಸರಿನಲ್ಲಿ ಬಂದ ಕರೆ ಎಂಬುದು ಮನವರಿಕೆಯಾಗಿದೆ.
ಕರೆ ಮಾಡಿದವರು ಯಾರು ಮತ್ತು ಯಾಕಾಗಿ ಎಂಬ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯು.ಟಿ.ಖಾದರ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..




























