ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ನಡಾಯಿ ಎಂಬಲ್ಲಿ ನಡೆದಿದೆ.
ಬಂಧಿತರನ್ನು ಕರಾಯ ಜನತಾ ಕಾಲೋನಿ ನಿವಾಸಿ ತೌಸಿಫ್ (32), ಪುತ್ತಿಲ ಮಣಿಲ ನಿವಾಸಿ ಉಸ್ಮಾನ್ (55), ವಳಾಲು ಬಜತ್ತೂರು ನಿವಾಸಿ ಇಕ್ಬಾಲ್ (34), ಕರಾಯ ಜನತಾ ಕಲೋನಿ ನಿವಾಸಿ ಇರ್ಫಾನ್ (25), ಕರಾಯ ಜನತಾ ಕಲೋನಿ ನಿವಾಸಿ ಅನಾಸ್ (23) ಎಂದು ಗುರುತಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸೌಮ್ಯ ಜೆ. ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ಸಮೀಪ ನಾರಾವಿ-ಗುರುವಾಯನಕೆರೆ ರಸ್ತೆಯಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ನಡೆಸುತ್ತಿದ್ದು, ಈ ಹಿನ್ನೆಲೆ ಬೆಂಗಾವಲಾಗಿ ಹೋಗುತ್ತಿರುವುದಾಗಿ ವಾಹನದಲ್ಲಿದ್ದ ಇಬ್ಬರು ತಿಳಿಸಿದ್ದಾರೆ.
ಓಮ್ನಿ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, 5 ಜಾನುವಾರುಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡು ಬಂದಿದ್ದು, 5 ಜನ ಆರೋಪಿಗಳನ್ನು ವಶಕ್ಕೆ ಪಡೆದು ಹಾಗೂ 5 ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಓಮ್ನಿ ಕಾರನ್ನು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000/- ರೂ. ಅಗಬಹುದಾಗಿದೆ.
ಈ ಬಗ್ಗೆ ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ 01-2023 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿದೆ..



























