ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ನಂತರ ಒಟಿಟಿಗೆ ಕಾಲಿಟ್ಟು ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಈ ಚಿತ್ರದ ಟೆಲಿವಿಷನ್ ಪ್ರೀಮಿಯರ್ಗೆ ಸಮಯ ಹತ್ತಿರ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದೆ.
ಶೀಘ್ರದಲ್ಲೇ ಟಿವಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಅದನ್ನು ತಿಳಿಸುವ ಸಲುವಾಗಿ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಅದನ್ನು ಕಂಡು ವೀಕ್ಷಕರು ಖುಷಿ ಆಗಿದ್ದಾರೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಈ ಸಿನಿಮಾವನ್ನು ಟಿವಿಯಲ್ಲಿ ನೋಡಿ ಆನಂದಿಸಲು ವೀಕ್ಷಕರು ಕಾದಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯಾದ ಕಂಬಳ, ಭೂತಕೋಲ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಮುಂತಾದವರು ಅಭಿನಯಿಸಿದ್ದಾರೆ.
ಕನ್ನಡದ ‘ಕಾಂತಾರ’ ಸಿನಿಮಾ ಬೇರೆ ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಯಿತು. ಎಲ್ಲ ರಾಜ್ಯಗಳಲ್ಲೂ ಈ ಚಿತ್ರಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಯ್ತು. ಎಲ್ಲ ಭಾಷೆಗಳಿಂದ ಸೇರಿ ‘ಕಾಂತಾರ’ ಗಳಿಸಿದ್ದು 400 ಕೋಟಿ ರೂಪಾಯಿಗಿಂತಲೂ ಅಧಿಕ. ಕನ್ನಡ ಸಿನಿಮಾದ ಈ ಸಾಧನೆಗೆ ಇಡೀ ದೇಶವೇ ಸಲಾಂ ಎಂದಿದೆ. ಇಂಥ ಚಿತ್ರವನ್ನು ಮನೆಯಲ್ಲೇ ಕುಳಿತು ಟಿವಿ ಪರದೆಯಲ್ಲಿ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಸ್ಟಾರ್ ಸುವರ್ಣ ವಾಹಿನಿ ಗುಡ್ ನ್ಯೂಸ್ ನೀಡಿದೆ.
ಟಿವಿಯಲ್ಲಿ ‘ಕಾಂತಾರ’ ಚಿತ್ರ ಯಾವಾಗ ಪ್ರಸಾರ ಆಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಪ್ರಸಾರ ದಿನಾಂಕದ ಬಗ್ಗೆ ಸದ್ಯದಲ್ಲೇ ವಾಹಿನಿಯವರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಪ್ರಸಾರ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ..




























