ಚಿಕ್ಕಮಗಳೂರು: ಸಬ್ಸಿಡಿ ಕಾರಿನ ವಿಚಾರವಾಗಿ ಹಣಕಾಸಿನ ವಿಷಯಕ್ಕೆ ಕೊಲೆಯಾದ ಬೆಂಗಳೂರಿನ ಕೋಣನಕುಂಟೆಯ ಯುವಕ ಶರತ್ ಮೃತದೇಹಕ್ಕಾಗಿ ಬೆಂಗಳೂರಿನ ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಮೂರನೇ ದಿನವಾದ ಇಂದು ಕೂಡ ಶೋಧ ಕಾರ್ಯ ಮುಂದುವರಿಯಲಿದೆ. ಮೃತದೇಹದ ಶೋಧಕ್ಕಾಗಿ ಎ1 ಹಾಗೂ ಎ2 ಇಬ್ಬರು ಆರೋಪಿಗಳನ್ನ ಸ್ಥಳಕ್ಕೆ ಕರೆತಂದಿರೋ ಪೊಲೀಸರು ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಆದರೆ ಮೃತದೇಹ ಮಾತ್ರ ಸಿಕ್ಕಿಲ್ಲ. ಆರೋಪಿಗಳು ಒಂದೊಂದು ಬಾರಿ ಒಂದೊಂದು ಜಾಗ ತೋರಿಸುತ್ತಿರುವುದರಿಂದ ಹುಡುಕಾಡಿ-ಹುಡುಕಾಡಿ ಪೊಲೀಸರು ಕೂಡ ಹೈರಾಣಾಗಿದ್ದಾರೆ.
ಒಮ್ಮೆ ಓರ್ವ ಬಲ ಭಾಗ ಅಂದ್ರೆ, ಮತ್ತೋರ್ವ ಎಡಭಾಗ ಅಂತಿದ್ದಾನೆ. ಇದು ಪೊಲೀಸರನ್ನ ಅತಂತ್ರಕ್ಕೀಡುಮಾಡಿದೆ. ಗೋಣಿಚೀಲದಲ್ಲಿ ತುಂಬಿ ಮೃತದೇಹವನ್ನು ಎಸೆದಿದ್ದೇವೆ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಗೋಣೀಚೀಲವಾದ್ರೆ ಮೃತದೇಹ ಸಿಗೋದು ಡೌಟ್. ಯಾಕಂದ್ರೆ ಚಾರ್ಮಾಡಿಯಲ್ಲಿ ಕಾಡುಹಂದಿ, ಸೀಳುನಾಯಿಗಳು ಹೆಚ್ಚಿದ್ದು ಚೀಲವನ್ನ ಎಳೆದೊಯ್ಯೋ ಸಾಧ್ಯತೆ ಇದೆ. ಅಷ್ಟೆ ಅಲ್ಲದೇ ಒಂಬತ್ತು ತಿಂಗಳ ಹಿಂದಿನ ಶವವಾಗಿರೋದ್ರಿಂದ ಸಿಗೋದು ಡೌಟ್ ಅಂತ ಸ್ಥಳೀಯರು ಹೇಳುತ್ತಿದ್ದಾರೆ.
ಪೊಲೀಸರು ಮಾತ್ರ ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಮೃತದೇಹಕ್ಕಾಗಿ ಬೆಟ್ಟ-ಗುಡ್ಡ ಹತ್ತಿ ಇಳಿದು ಹುಡುಕಾಡುತ್ತಿದ್ದಾರೆ. 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿಯ ಕಗ್ಗತ್ತಲಲ್ಲಿ ಎಲ್ಲಿ ಬಿಸಾಡಿದ್ದಾರೋ ಏನೋ. ಆದರೆ ಪೊಲೀಸರು ಅವರು ಹೇಳಿದ ಕಡೆಯಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಮೃತದೇಹದ ಯಾವುದೇ ಗುರುತು ಪತ್ತೆಯಾಗಿಲ್ಲ. ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಹುಡುಕೋದು ಅಷ್ಟು ಸುಲಭದ ಮಾತಲ್ಲ.
ಚಾರ್ಮಾಡಿ ಘಾಟ್ ಸಾವಿರಾರು ಅಡಿ ಪ್ರಪಾತದ ಪ್ರದೇಶ. ದಟ್ಟ ಕಾನನ. ಅಸಂಖ್ಯಾತ ಪ್ರಾಣಿಗಳ ಆವಸ ಸ್ಥಾನ. ಜೊತೆಗೆ ಯಥೇಚ್ಛವಾಗಿ ಮಳೆ ಬೀಳುವ ಪ್ರದೇಶ. ಇಲ್ಲಿ ಬೀಳುವ ಮಳೆ ನೀರು ಕಣಿವೆಯಲ್ಲಿ ಹರಿದು ನೇತ್ರಾವತಿ ನದಿ ಸೇರುತ್ತೆ. 2022ರಲ್ಲಿ ಕಾಫಿನಾಡಲ್ಲಿ ಯಥೇಚ್ಛವಾಗಿ ಮಳೆ ಸುರಿದಿದೆ. ಮಳೆ ನೀರಲ್ಲಿ ಕೊಚ್ಚಿಯೂ ಹೋಗಿರಬಹುದು ಅಥವಾ ಪ್ರಾಣಿಗಳು ತಿಂದಿರಬಹುದು. ಇಂತಹ ದುರ್ಗಮ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಹೆಣ ಹುಡುಕೋದು ಕಷ್ಟ ಸಾಧ್ಯ. ಇಲ್ಲಿ ಒಂದೇ ರೀತಿಯ ತಿರುವುಗಳು ಹತ್ತಾರಿವೆ. ಕೊಲೆ ಮಾಡಿರೋ ಭಯದಲ್ಲಿ ಮಧ್ಯರಾತ್ರಿಯ ಕತ್ತಲಲ್ಲಿ ಮೃತದೇಹವನ್ನ ಯಾವ ತಿರುವಿನಲ್ಲಿ ಎಲ್ಲಿ ಎಸೆದಿದ್ದಾರೋ ಗೊತ್ತಿಲ್ಲ. ಆದರೆ ಪೊಲೀಸರು ಅವರು ಹೇಳಿದ ಜಾಗದಲ್ಲೆಲ್ಲ ನಿರಂತರವಾಗಿ ಹುಡುಕಾಡುತ್ತಿದ್ದಾರೆ.


























