ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ದರ್ಬೆ ಫೋರಮ್ ಹೈಟ್ಸ್, ಮೇಸರ್ಸ್ ಸಹದ್ ರೆಂಟಲ್ ಪ್ರೈ ಲಿ. ಅವರು ಪಡೆದ ಸಾಲವನ್ನು ನಾಲ್ಕೈದು ವರ್ಷದಿಂದ ಮರುಪಾವತಿಸಿಲ್ಲ ಎಂದು ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಜ್ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ ವೇಳೆ ಕಟ್ಟಡಕ್ಕೆ ಸಂಬಂಧಿಸಿದವರ ಜೊತೆ ಮಾತಿನ ಚಕಮಕಿ ನಡೆದ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಇಂದು ಮತ್ತೆ ಆಗಮಿಸಿದ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಗಳ ತಂಡ ಕಟ್ಟಡಕ್ಕೆ ಸಂಬಂಧಿಸಿದವರ ಮನೆ ಮಹಜರು ನಡೆಸಿ ಸೀಜ್ ಮಾಡಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಸಹದ್ ರೆಂಟಲ್ ಪ್ರೈವೇಟ್ ಲಿಮಿಟೆಡ್ ಅವರು ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ಪಡೆದ ಸಾಲವನ್ನು
ಮರುಪಾವತಿಸಿಲ್ಲ ಎಂದು 2022ರ ಅ.28 ರಂದು ಕಟ್ಟಡವನ್ನು ಬಹಿರಂಗವಾಗಿ ಹರಾಜು ಮಾಡಲಾಗಿತ್ತು. ಅದರಲ್ಲಿ ಬಿಡ್ಡುದಾರರಾಗಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರು 13.5 ಕೋಟಿ ರೂಪಾಯಿಗಳಿಗೆ ಸ್ಥಿರಾಸ್ಥಿಯನ್ನು ಖರೀದಿ ಮಾಡಿದ್ದರು. ಇದನ್ನು 2022ರ ಡಿಸೆಂಬರ್ 22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು.


ಡಿಸೆಂಬರ್ 26ರಂದು ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರ ಹೆಸರಿಗೆ
ನೋಂದಣಿ ಮಾಡಲಾಗಿತ್ತು.

ಆ ಬಳಿಕ ಕಟ್ಟಡವನ್ನು ಸ್ವಾಧೀನತೆ ಮಾಡುವ ನಿಟ್ಟನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ಸ್ಥಳಕ್ಕೆ ಆಗಮಿಸಿದಾಗ ಕಟ್ಟಡಕ್ಕೆ ಸಂಬಂಧಿಸಿದವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಡೀ ಕಟ್ಟಡಗಳಿಗೆ ನೋಟೀಸ್ ನೀಡಿ ಬಿಟ್ಟು ಕೊಡುವಂತೆ ತಿಳಿಸಿದ್ದು, ಈಗಾಗಲೇ ಬಂದ್ ಆಗಿರುವ ಕೋಣೆಗಳಿಗೆ ಬೀಗ ಹಾಕಲಾಗಿತ್ತು.


ಜ.5 ರಂದು ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಮತ್ತೆ ಆಗಮಿಸಿದ್ದು, ಕಟ್ಟಡಕ್ಕೆ ಸಂಬಂಧಿಸಿದವರ ಮನೆ ಮಹಜರು ನಡೆಸಿ ಬೀಗ ಹಾಕಿ ಸೀಜ್ ಮಾಡಿ ತೆರಳಿದ್ದಾರೆ ಎಂದು ವರದಿಯಾಗಿದೆ…

























