ಮಂಗಳೂರು/ಶಿವಮೊಗ್ಗ: ಐಸಿಸ್ ಉಗ್ರ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಎನ್.ಐ.ಎಯಿಂದ ಬಂಧಿಸಲಾದ ಇಂಜಿನಿಯರಿಂಗ್ ವಿದ್ಯಾರ್ಥಿ ರಿಶಾನ್ ತಾಜುದ್ದೀನ್ ಶೇಖ್ ಮತ್ತು ಹುಜೈರ್ ಫರ್ಹಾನ್ ಬೇಗ್ ಐಸಿಸ್‌ನಿಂದ ಕ್ರಿಪ್ಟೋ ವ್ಯಾಲೆಟ್‌ಗಳ ಮೂಲಕ ದೇಣಿಗೆ ಪಡೆಯುತ್ತಿದ್ದುದು ಬೆಳಕಿಗೆ ಬಂದಿದೆ.
ಆರೋಪಿಗಳು ನಿಷೇಧಿತ ಐಸಿಸ್‌ನ ನಿರ್ವಾಹಕನಿಂದ ದೇಣಿಗೆಯಾಗಿ ಹಣ ಪಡೆದು ದೇಶದಲ್ಲಿ ಐಸಿಸ್ ಚಟುವಟಿಕೆ ವಿಸ್ತರಿಸಲು ಸಂಚು ರೂಪಿಸಿದ್ದರು. ವಾಹನ, ಸಂಸ್ಥೆಗಳು, ಮದ್ಯದ ಅಂಗಡಿ, ಗೋದಾಮು, ಟ್ರಾನ್ಸ್ ಫಾರ್ಮರ್ ಮೊದಲಾದವುಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದರು ಎಂದು ಎನ್‌ಐಎ ತಿಳಿಸಿದೆ.
ಎನ್‌ಐಎ ಗುರುವಾರ ಮಂಗಳೂರು, ಶಿವಮೊಗ್ಗ, ಉಡುಪಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ದಾಳಿ ನಡೆಸಿತ್ತು. ರಿಶಾನ್ ತಾಜುದ್ದೀನ್ ಶೇಖ್ ಬ್ರಹ್ಮಾವರ ವಾರಂಬಳ್ಳಿ ನಿವಾಸಿಯಾಗಿದ್ದು, ಮಂಗಳೂರು ಕೊಣಾಜೆ ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ಈತ ಈಗಾಗಲೇ ಎನ್‌ಐಎ ವಶದಲ್ಲಿರುವ ಮಾಝ್ ಮುನೀರ್‌ನ ಸಹವರ್ತಿ. ಮಾಝ್ ಮುನೀರ್ ಕೂಡ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ರಿಶಾನ್ ಮೇಲೆ ಮುನೀರ್ ಮೂಲಭೂತವಾದಿತ್ವ ವಿಚಾರಗಳ ಬಗ್ಗೆ ಬಹುವಾಗಿ ಪ್ರಭಾವ ಬೀರಿ ಪ್ರೇರೇಪಿಸಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಹುಜೈರ್ ಫರ್ಹಾನ್ ಶಿವಮೊಗ್ಗ ಜಿಲ್ಲೆಯ ಟಿಪ್ಪು ಸುಲ್ತಾನ್ ನಗರದ ನಿವಾಸಿ. ಎನ್‌ಐಎಯು ಆರೋಪಿಗಳ ಮನೆಯಿಂದ ಡಿಜಿಟಲ್ ಉಪಕರಣಗಳು, ಚಟುವಟಿಕೆಗಳನ್ನು ಸಾಕ್ಷೀಕರಿಸುವ ಪೂರಕ ದಾಖಲೆಗಳನ್ನು ಜಪ್ತಿ ಮಾಡಿದೆ.
ರಜಾದಿನಗಳಲ್ಲಿ ಮತ್ತು ವಾರಾಂತ್ಯ ವಾದ ಶನಿವಾರ-ರವಿವಾರ ವಾರಂಬಳ್ಳಿಯ ಫ್ಲ್ಯಾಟ್‌ಗೆ ಬರುತ್ತಿದ್ದ ರಿಶಾನ್ ಹೆಚ್ಚಾಗಿ ಒಳಗೆಯೇ ಇರುತ್ತಿದ್ದ, ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ, ಫ್ಲ್ಯಾಟ್‌ನ ಯುವಕರೊಂದಿಗೆ ಮಾತ್ರ ಕಾಲ ಕಳೆಯುತ್ತಿದ್ದ ರಿಶಾನ್ ಸ್ಥಳೀಯರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ..

























