ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮುಖಂಡ, ಸಜೀಪ ನಿವಾಸಿ ರಾಜೇಶ್ ಪೂಜಾರಿ ಸಾನದಮನೆ ರವರ ಮೃತದೇಹವು ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ಪೂಜಾರಿಯವರ ಅಕ್ಕನ ಗಂಡ ದಯಾನಂದ ರವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.12 ರಂದು ಮುಂಜಾನೆ ದಯಾನಂದ ರವರ ದೂರದ ಸಂಬಂಧಿ ಧೀರಜ್ ಎಂಬವರು ಕರೆ ಮಾಡಿ ನಿನ್ನ ಹೆಂಡತಿಯ ತಮ್ಮನಾದ ರಾಜೇಶ ರವರ ಸ್ಕೂಟರ್ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗೂಡಿನಬಳಿ ನೇತ್ರಾವತಿ ಬ್ರಿಡ್ಜ್ ನ ಎಡಭಾಗದ ಸುರಕ್ಷತಾ ಪಟ್ಟಿಗೆ ಮಗ್ಗಲಾಗಿ ಬಿದ್ದಿರುವ ವಿಚಾರವನ್ನು ತಿಳಿಸಿದ್ದು, ವಿಚಾರ ತಿಳಿದ ಬಳಿಕ ದಯಾನಂದ್ ಸ್ಥಳಕ್ಕೆ ಬಂದು ಮಾವನವರಾದ ನಾಗೇಶ ಪೂಜಾರಿ ರವರಿಗೆ ಕರೆ ಮಾಡಿ ವಿಚಾರಿದಾಗ ರಾಜೇಶ್ ನಿನ್ನೆ ಬೆಳಿಗ್ಗೆ ಸೆಂಟ್ರಿಂಗ್ ಕೆಲಸದ ನಿಮಿತ್ತ ಮನೆಯಿಂದ ಹೋಗಿದ್ದು ವಾಪಾಸ್ಸು ಬಂದಿರುವುದಿಲ್ಲವಾಗಿ ತಿಳಿಸಿದರು.
ಬಳಿಕ ದಯಾನಂದ್ ಹಾಗೂ ಸ್ಥಳೀಯರು ಸೇರಿಕೊಂಡು ಹುಡುಕಾಡಿದಾಗ ರಾಜೇಶ್ ಸುಳಿವು ಸಿಗದೇ ಇದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ನೇತ್ರಾವತಿ ನದಿ ನೀರಿನಲ್ಲಿ ಹುಡುಕಾಡಿದಾಗ ಬೆಳಿಗ್ಗೆ 10.45 ಗಂಟೆಗೆ ನೇತ್ರಾವತಿ ನದಿ ನೀರಿನಲ್ಲಿ ರಾಜೇಶ್ ರವರ ಮೃತದೇಹ ಪತ್ತೆಯಾಗಿರುತ್ತದೆ. ರಾಜೇಶನ ಮರಣದಲ್ಲಿ ಸಂಶಯವಿದ್ದು, ಈ ಬಗ್ಗೆ ಮೃತದೇಹದ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ 01/2023 ಕಲಂ: 174 (3) & (iv) ಸಿ ಆರ್ ಪಿ ಸಿ ಅಂತೆ ಪ್ರಕರಣ ದಾಖಲಾಗಿದೆ.




























