ಕನ್ನಡದ ‘ಕಾಂತಾರ’ ಸಿನಿಮಾದಿಂದ ನಟಿ ಸಪ್ತಮಿ ಗೌಡ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಖ್ಯಾತಿ ಗಳಿಸಿದ್ದಾರೆ. ಅವರು ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಬಾಲಿವುಡ್ ಅಂಗಳಕ್ಕೆ ಸಪ್ತಮಿ ಗೌಡ ಕಾಲಿಡುತ್ತಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಅವರ ಹೊಸ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಹೆಸರು ಇಡಲಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸಪ್ತಮಿ ಗೌಡ ಭಾಗಿ ಆಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸಪ್ತಮಿ ಗೌಡ ನಟಿಸಿದ ಮೊದಲ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’. ಆ ಸಿನಿಮಾದಲ್ಲಿ ಅವರು ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. ಎರಡನೇ ಸಿನಿಮಾ ‘ಕಾಂತಾರ’ದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅಭಿಷೇಕ್ ಅಂಬರೀಷ್ ನಾಯಕತ್ವದ ‘ಕಾಳಿ’ ಸಿನಿಮಾ ಅವರ ಮೂರನೇ ಚಿತ್ರ ಆಗಲಿದೆ. 4ನೇ ಚಿತ್ರದ ಮೂಲಕ ಸಪ್ತಮಿ ಗೌಡ ನೇರವಾಗಿ ಬಾಲಿವುಡ್ ಟಿಕೆಟ್ ಪಡೆದುಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಯಶಸ್ಸಿನ ಬಳಿಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಅವರೀಗ ಕೊರೊನಾ ವಾಕ್ಸಿನ್ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಆ ಎಲ್ಲ ಕಲಾವಿದರ ಜೊತೆ ನಟಿಸುವ ಚಾನ್ಸ್ ಸಪ್ತಮಿ ಗೌಡ ಅವರಿಗೆ ಸಿಕ್ಕಿದೆ.
‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಸಾಕಷ್ಟು ನಿರೀಕ್ಷೆ ಇದೆ. ಕೊವಿಡ್ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ..