ಚಿಕ್ಕಮಗಳೂರು: ಪ್ರೇಮ ವೈಫಲ್ಯದಿಂದ ಅಪ್ರಾಪ್ತ ಬಾಲಕಿ ಕಳೆನಾಶಕ ಸೇವೆಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ನಡೆದಿದೆ.
ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ (17) ಮೃತ ಬಾಲಕಿ.
ಈಕೆ ಎಸ್.ಕೆ ಮೇಗಲ್ ಗ್ರಾಮದ ನಿತೇಶ್ ಎಂಬವನನ್ನ ಪ್ರೀತಿಸುತ್ತಿದ್ದಳು. ಆತ ವಂಚಿಸಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ, ಜನವರಿ 10ರಂದು ಕಾಲೇಜಿನಿಂದ ಮನೆಗೆ ಬಂದ ದೀಪ್ತಿ ಕಳೆನಾಶಕ ಸೇವಿಸಿದ್ದಾಳೆ. ಬಳಿಕ ಮನೆಯಲ್ಲಿದ್ದ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ.
ಪೋಷಕರು ಕೂಡಲೇ ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ದೀಪ್ತಿ ಶನಿವಾರ ಸಂಜೆ ಸಾವನ್ನಪ್ಪಿದ್ದಾಳೆ.

ಸಾಯುವ ಮುನ್ನ ಆಕೆ “ನಾನು ನಿತೇಶ್‌ನನ್ನ ಪ್ರೀತಿಸುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಜಗಳದಿಂದಾಗಿ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ” ಎಂದು ಡೆತ್‌ನೋಟ್ ಬರೆದಿದ್ದಾಳೆ. ಆರಂಭದಲ್ಲಿ ಕುದುರೆಮುಖ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದಾರೆ. ಚಿಕ್ಕಮಗಳೂರು ಎಸ್ಪಿ ತರಾಟೆಗೆ ತೆಗೆದುಕೊಂಡ ನಂತರ ಕುದುರೆಮುಖ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿತೇಶ್‌ನನ್ನ ಬಂಧಿಸಿಲ್ಲ ಎಂದು ಬಾಲಕಿಯ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.




























