ಮಂಗಳೂರು: ಕಳೆದ ವರ್ಷದ ನವೆಂಬರ್ ನಲ್ಲಿ ನಗರದ ಕೆಎಸ್ ರಾವ್ ರಸ್ತೆಯ ಬಳಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 35ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಪಡಂಗಡಿ-ಮದ್ದಡ್ಕ ನಿವಾಸಿ ಕುಂಞಿಮೋನು ಯಾನೆ ಜಾಫರ್ ಯಾನೆ ಹಮೀದ್ (48) ಎಂದು ಗುರುತಿಸಲಾಗಿದೆ.
ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವು ಮಾಡಿದ್ದು ಅದನ್ನು ಮಣ್ಣಿನಡಿ ಹೂತು ಹಾಕಿ ತಲೆಮರೆಸಿಕೊಂಡಿದ್ದ.
ಆತ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಈ ವೇಳೆ ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು. ಬಳಿಕ ತಪಾಸಣೆ ನಡೆಸಿ 5.80 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆ ಪೊಲೀಸರು ಜ.14ರ ಬೆಳಗಿನ ಜಾವ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ..


























