ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜ.22ರಂದು ಅಪರಾಹ್ನ ಮಂಗಳೂರು ಲಾಲ್ ಬಾಗ್ ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಯಾದರು.

ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ಸಾವಿರಾರು ಮಂದಿಯ ಹರ್ಷೋದ್ಘಾರ, ಕರತಾಡನದೊಂದಿಗೆ ಅಶೋಕ್ ರೈ ಕಾಂಗ್ರೆಸ್ ಕೈ ಹಿಡಿದರು.
ದರ್ಬೆಯಲ್ಲಿರುವ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಛೇರಿ ಬಳಿ ವಾಹನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪಿ. ಸಂಕಪ್ಪ ಶೆಟ್ಟಿ ಮತ್ತು ಹಿರಿಯ ಮುಂದಾಳು ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿಯವರು ಧ್ವಜ ಹಸ್ತಾಂತರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಶೋಕ್ ಕುಮಾರ್, ತಾಲೂಕು ಇಂಟಕ್ ಅಧ್ಯಕ್ಷರಾದ ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು, ಉದ್ಯಮಿಗಳಾದ ಸುದೇಶ್ ಶೆಟ್ಟಿ ಶಾಂತಿನಗರ, ನಿಹಾಲ್ ಶೆಟ್ಟಿ ಕಲ್ಲಾರೆ ಸಹಿತ ಹಲವರು ಉಪಸ್ಥಿತರಿದ್ದರು.

ಬಳಿಕ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರ ನೇತೃತ್ವದಲ್ಲಿ ಬಸ್, ಕಾರು ಸಹಿತ 100ಕ್ಕೂ ಅಧಿಕ ವಾಹನಗಳಲ್ಲಿ ಮೆರವಣಿಗೆ ನಡೆಯಿತು. ಪುತ್ತೂರಿನಿಂದ ಮಂಗಳೂರು ತನಕವೂ ಅಶೋಕ್ ರೈ ಪರ ಘೋಷಣೆಯೊಂದಿಗೆ ಮೆರವಣಿಗೆ ಸಾಗಿತು. ಕರಾವಳಿ ಉತ್ಸವ ಮೈದಾನದ ಮುಂಭಾಗದಲ್ಲಿ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಮಹಿಳೆಯರ ಸಹಿತ ನೂರಾರು ಮಂದಿ ಒಗ್ಗೂಡಿ ಜಯಘೋಷ ಮೊಳಗಿಸಿದರು.
ಜೈಕಾರ, ಹರ್ಷೋದ್ಘಾರ, ಚಪ್ಪಾಳೆಯೊಂದಿಗೆ ಅಶೋಕ್ ರೈಯವರನ್ನು ಅವರ ಅಭಿಮಾನಿ ಬಳಗದವರು ಸಭೆಗೆ ಕರೆ ತಂದರು. ನಂತರ ಸಭಾ ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ಅಶೋಕ್ ಕುಮಾರ್ ರೈಯವರನ್ನು ವೇದಿಕೆಗೆ ಕರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಈ ವೇಳೆ ಅಶೋಕ್ ರೈ ಅಭಿಮಾನಿ ಬಳಗದವರು ಹರ್ಷೋದ್ಘಾರ ಮೊಳಗಿಸಿದರು.

























