ಕಾರ್ಕಳ: ಕಳೆದ ಕೆಲವು ತಿಂಗಳಿನಿಂದ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಹಲವು ಸುದ್ದಿಗಳಿಗೆ ಕಾರಣವಾಗಿದ್ದ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಸ್ಪರ್ಧೆ ಘೋಷಣೆಯಿಂದ ಕಾರ್ಕಳ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಇದೀಗ ತ್ರಿಕೋನ ಸ್ಪರ್ಧೆ ಉಂಟಾಗಿದೆ.
ಕಾರ್ಕಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಾರು ಏನೇ ಒತ್ತಡ ಹಾಕಿದರೂ ನಾನು ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ. ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ, ಅವರ ಒತ್ತಡದಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.
ನಾನು ಬಿಜೆಪಿ ವಿರೋಧಿಯಲ್ಲ. ನಾನು ಮೋದಿ ಪರವಾಗಿ ಹಿಂದುತ್ವದ ಪರವಾಗಿದ್ದೇನೆ, ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ದ, ಹಿಂದು ವಿರೋಧಿಗಳ ವಿರುದ್ಧ ಎಂದರು.


























