ಪುತ್ತೂರು : ರಾಜ್ಯದ ಅಂಗನವಾಡಿ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪ್ರಾಮಾಣಿಕವಾಗಿ ಸೇವೆಗೈಯುತ್ತಿರುವ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಒಪ್ಪಿ ಅನುಷ್ಠಾನಗೊಳಿಸಬೇಕಾದ ರಾಜ್ಯ ಸರಕಾರ ಅದನ್ನು ಮಾಡುವ ಬದಲು ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ,ಬಿಜೆಪಿ ಸರಕಾರದ ನಡವಳಿಕೆ ಅತ್ಯಂತ ಖಂಡನೀಯ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಹೇಳಿದ್ದಾರೆ.
ಹಿಂದೆ ಪುತ್ತೂರು ಶಾಸಕರಾಗಿದ್ದ ವಿನಯಕುಮಾರ್ ಸೊರಕೆ ಯವರು 1989ರಲ್ಲಿ ಅಂಗನವಾಡಿ ಯೋಜನೆಯನ್ನು ತಂದಿದ್ದರು, ಆಗ ಅಂಗನವಾಡಿ ಕಾರ್ಯಕರ್ತರಿಗೆ ರೂ 275 ಹಾಗೂ ಸಹಾಯಕರಿಗೆ 110 ರೂಪಾಯಿ ಗೌರವ ವೇತನ ಸಿಗುತ್ತಿತ್ತು ,ಅತ್ಯಂತ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತರು ಕನಿಷ್ಠ ವೇತನದಲ್ಲಿ ಗರಿಷ್ಠ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ.
ಕಳೆದ ಮೂವತ್ತು ಮೂರು ವರ್ಷಗಳಲ್ಲಿ ಸ್ವಲ್ಪ, ಸ್ವಲ್ಪ ವೇತನ ಹೆಚ್ಚಾಗಿ ಇದೀಗ ಕಾರ್ಯಕರ್ತರು ರೂ 11.500 ಹಾಗೂ ಸಹಾಯಕರು ರೂ 6,000 ವೇತನ ಪಡೆಯುತ್ತಿದ್ದಾರೆ. ಈ ಕನಿಷ್ಠ ವೇತನದಲ್ಲಿ ಜೀವನ ನಿರ್ವಹಣೆ ಮಾಡಬೇಕಾಗಿರುತ್ತದೆ. ಇದೀಗ ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿಯಂತೆ ಅಂಗನವಾಡಿಯಿಂದ – 2ನೇ ತರಗತಿಯ ವರೆಗೆ ಫ್ರೀ ಪ್ರೈಮರಿ ಮಾಡುವ ಯೋಜನೆ ಹಾಕಿಕೊಂಡಿದೆ ಇದರಿಂದ ಅಂಗನವಾಡಿ ಕೇಂದ್ರದ ಕಲ್ಪನೆಯ ಬದಲಿಗೆ ಅಂಗನವಾಡಿ ಕೇಂದ್ರದಿಂದ 2 ನೇ ತರಗತಿಯವರೆಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತರು ಹೊರಬೇಕಾಗಿರುತ್ತದೆ. ಇದರಿಂದ ಶಿಕ್ಷಕರು ಮಾಡುವ ಕೆಲಸ ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತರು ಮಾಡಬೇಕಾಗಿರುತ್ತದೆ.
ಆದುದರಿಂದ ಶಿಕ್ಷಕರಿಗೆ ಕೊಡುವ ವೇತನವನ್ನು ನಮಗೆ ಕೊಡಬೇಕು, ನಮಗೆ ಸೇವಾ ಭದ್ರತೆ ನೀಡಬೇಕು.
ಸುಪ್ರೀಂ ಕೋರ್ಟ್ ಆದೇಶದಂತೆ ನಮಗೆ ಗ್ರಾಚ್ಯುಟಿ ನೀಡಬೇಕು ಎಂಬ ಬೇಡಿಕೆಯನ್ನಿಟ್ಟು ಕಾರ್ಯಕರ್ತರು ಮಾಡುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದ್ದು ಇದನ್ನು ಸರಕಾರ ಪರಿಗಣಿಸಿ ಅವರ ಬೇಡಿಕೆಯನ್ನು ಸರಕಾರ ಒಪ್ಪಿ ಅದನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸರಕಾರವನ್ನು ಆಗ್ರಹಿಸುತ್ತಿದೆ ಎಂದು ಹೇಳಿದ ಮಹಮ್ಮದ್ ಅಲಿಯವರು ಸರಕಾರದ ಇಲಾಖೆಗಳು ಹಾಕಿಕೊಂಡಿರುವ ಗಣತಿ, ಸಮೀಕ್ಷೆ ಕಾರ್ಯಗಳು ಮತಗಟ್ಟೆಯ ಬಿ ಎಲ್ ಒ ಗಳ ಕೆಲಸ ಗಳನ್ನು ಅಂಗನವಾಡಿ ಕಾರ್ಯಕರ್ತರಲ್ಲಿ ಮಾಡಿಸಿ ಈಗ ತಮ್ಮ ನ್ಯಾಯಯುತ ಬೇಡಿಕೆ ಮುಂದಿಟ್ಟು ಮಾಡುತ್ತಿರುವ ಚಳುವಳಿಯನ್ನು ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡುತ್ತಿದೆ ಹಾಗೂ ಪೊಲೀಸರ ಮೂಲಕ ಮಹಿಳಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿರುವ ಸರಕಾರದ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, ಕೂಡಲೇ ಸರಕಾರ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಯಾವರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಎಚ್ ಮಹಮ್ಮದ್ ಅಲಿ ಹೇಳಿದರು.

























