ನವದೆಹಲಿ: 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಬುಧವಾರ (ಫೆಬ್ರವರಿ 01) ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೆಲವು ಜನಯೋಪಯೋಗಿ ಸರಕು ಸೇವೆಯಲ್ಲಿ ಇಳಿಕೆಯಾಗಿದ್ದು, ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
ಯಾವುದು ಏರಿಕೆ, ಯಾವುದು ಇಳಿಕೆಯಾಗಿದೆ ಎಂಬ ವಿವರ ಇಲ್ಲಿದೆ…
ಯಾವುದು ದುಬಾರಿ..!!?
- ಚಿನ್ನ, ಬೆಳ್ಳಿ, ವಜ್ರ
- ಪ್ಲ್ಯಾಟಿನಮ್
- ರೆಡಿಮೇಡ್ ಬಟ್ಟೆ
- ವಿದೇಶಿ ವಾಹನಗಳ ಆಮದು ದುಬಾರಿ
- ಸಿಗರೇಟ್
ಯಾವುದು ಅಗ್ಗ?
- ಮೊಬೈಲ್
- ಕ್ಯಾಮರಾ ಲೆನ್ಸ್
- ಟಿವಿ
- ಬ್ಲೆಂಡೆಡ್ ಸಿಎನ್ ಜಿ
- ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಒತ್ತು ನೀಡುವ ಮೂಲಕ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ, ರೋಗ ಮುಕ್ತ ನಾಟಿ ವಸ್ತುಗಳನ್ನು ಅಭಿವೃದ್ಧಿಪಡಿಸಲು ಮತ್ತು ಒದಗಿಸಲು 2,200 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು. ಅದೇ ವೇಳೆ ಬಜೆಟ್ ಹಂಚಿಕೆ ರೈತ ಕೇಂದ್ರಿತವಾಗಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಕೃಷಿ ಸ್ಟಾರ್ಟಪ್‌ಗಳಿಗೆ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು. ಹತ್ತಿಯ ಬೆಳವಣಿಗೆ ಮತ್ತು ರಫ್ತು ಹೆಚ್ಚಿಸಲು ರೈತರು, ರಾಜ್ಯ ಮತ್ತು ಕೈಗಾರಿಕೆಗಳ ನಡುವೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಗಿ ಸಂಶೋಧನೆಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಗುರಿಯಾಗಿದೆ. ರಾಗಿಯನ್ನು “ಶ್ರೀ ಅನ್ನ” ಎಂದು ಕರೆಯಲಾಗಿದೆ. ಹೈದರಾಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ಅನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲಾಗುವುದು. ದೇಶದಾದ್ಯಂತ 63,000 ಕೃಷಿ ಸೊಸೈಟಿಗಳನ್ನು ಗಣಕೀಕರಣಗೊಳಿಸಲು ಬಜೆಟ್‌ನಲ್ಲಿ 2,516 ಕೋಟಿ ರೂ. ಕೃಷಿ ಬೆಳೆಗಳಿಗೆ ಬೃಹತ್ ವಿಕೇಂದ್ರೀಕೃತ ಸಂಗ್ರಹಣೆಯನ್ನು ಸೃಷ್ಟಿಸುವ ಗುರಿಯನ್ನು ಬಜೆಟ್ ಹೊಂದಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆ
ಹೊಸ ತೆರಿಗೆ ವಿಧಾನದ ಅಡಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಘೋಷಿಸಿದರು. ಮಧ್ಯಮ ವರ್ಗದ ವೇತನದಾರ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಹೊಸ ತೆರಿಗೆ ವಿಧಾನದ ಅಡಿಯಲ್ಲಿ 7 ಲಕ್ಷ ರೂ. ಆದಾಯದವರೆಗೂ ಆದಾಯ ತೆರಿಗೆ ಇರುವುದಿಲ್ಲ ಎಂದು ಅವರು ಹೇಳಿದರು.
ಆದಾಯ ತೆರಿಗೆಗೆ ಸಂಬಂಧಿಸಿದ ಮುಖ್ಯ ಘೋಷಣೆಗಳೇನು?
- ವಿನಾಯ್ತಿ: 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಪ್ರಸ್ತಾಪಿಸಿದರು.
- ಟ್ಯಾಕ್ಸ್ ಸ್ಲ್ಯಾಬ್ಗಳು: ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ. 3 ಲಕ್ಷ ರೂ.ನಿಂದ ತೆರಿಗೆ ಹಂತ ಆರಂಭವಾಗಲಿದೆ.
- ಸ್ಟಾಂಡರ್ಡ್ ಡಿಡಕ್ಷನ್: ₹ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.
- ಗರಿಷ್ಠ ತೆರಿಗೆ: ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ.
- ಲೀವ್ ಎನ್ಕ್ಯಾಶ್ಮೆಂಟ್ (ರಜೆ ನಗದೀಕರಣ): ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್ಕ್ಯಾಶ್ಮೆಂಟ್) ಸೌಲಭ್ಯದ ಮೇಲೆ ಈವರೆಗೆ 3 ಲಕ್ಷ ರೂ.ವರೆಗೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು 25 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ಧಾರೆ. 2.4 ಲಕ್ಷ ಕೋಟಿ ರೂ ಅನ್ನು ರೈಲ್ವೆಗೆ ನೀಡಲಾಗಿದೆ. ಇದು ರೈಲ್ವೆ ಇಲಾಖೆ ತನ್ನ ಇತಿಹಾಸದಲ್ಲೇ ಸಿಕ್ಕಿದ ಗರಿಷ್ಠ ಮೊತ್ತವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಮೀಸಲು
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಈ ಕುರಿತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿತ್ತು. ಇದೀಗ ಈ ಘೋಷಣೆಯಿಂದ ಮಧ್ಯ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಮ್ಯಾನ್‌ಹೋಲ್ ಟು ಮೆಷಿನ್: ಒಳಚರಂಡಿ ವ್ಯವಸ್ಥೆ ಕುರಿತು ಬಜೆಟ್ನಲ್ಲಿ ಮಹತ್ವದ ಘೋಷಣೆ
ಒಳಚರಂಡಿ ವ್ಯವಸ್ಥೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಬಜೆಟ್ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮ್ಯಾನ್‌ಹೋಲ್ ಟು ಮೆಷಿನ್ ಮೋಡ್ ಎಂದು ಕರೆದಿರುವ ಹಣಕಾಸು ಸಚಿವರು, ದೇಶದಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಯಾಂತ್ರಿಕ ಪ್ರಕ್ರಿಯೆಯ ಮೂಲಕ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಶೇಕಡಾ 100 ರಷ್ಟು ಪರಿವರ್ತಿಸಲು ಸಕ್ರಿಯಗೊಳಿಸಲಾಗುವುದು ಎಂದು ಅವರು ಹೇಳಿದರು.
2024ರವರೆಗೂ ಉಚಿತ ಆಹಾರ ವಿತರಣೆ
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಕೇಂದ್ರ ಸರ್ಕಾರ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಆಹಾರವಸ್ತುಗಳ ವಿತರಣೆಯ ಯೋಜನೆ ಇನ್ನೂ ಎರಡು ವರ್ಷ ಮುಂದುವರಿಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರವು 2023ರ ಡಿಸೆಂಬರ್ವರೆಗೂ ಉಚಿತ ಆಹಾರಧಾನ್ಯಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು. ಇದೀಗ 2024ರವರೆಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಯಡಿ 81 ಕೋಟಿಗೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ತೀರಾ ಅಗ್ಗದ ಬೆಲೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ಅಗತ್ಯ ಆಹಾರವಸ್ತುಗಳನ್ನು ನೀಡುತ್ತದೆ.
157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
ಬಜೆಟ್‍ನಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡುವುದಾಗಿ ಘೊಷಣೆ ಮಾಡಿದರು.
ಹೌದು. ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರ ಕ್ಕೂ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮಹಾಮಾರಿ ಕೊರೊನಾ ನಂತರ ಶಿಕ್ಷಣ ಕ್ಷೇತ್ರ ಚೇತರಿಸಿಕೊಳ್ಳಲು ಬೇಕಾದ ಕೆಲವು ಅಗತ್ಯ ಅಂಶಗಳನ್ನು ಈ ಬಾರಿ ಬಜೆಟ್‍ನಲ್ಲಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 2014 ರಿಂದ ಸ್ಥಾಪಿತವಾಗಿರುವ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.
ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮುಂದಿನ 3 ವರ್ಷಗಳಲ್ಲಿ ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 740 ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಮಕ್ಕಳು ಮತ್ತು ಯುವ ಸಮುದಾಯಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಮಾಡುವುದಾಗಿ ತಿಳಿಸಿದರು.
ಸ್ಥಳೀಯ ಭೌಗೋಳಿಕತೆ, ಭಾಷೆಗಳಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆ ಮತ್ತು ಸಾಧನ-ಅಜ್ಞೇಯತಾವಾದಿ ಪ್ರವೇಶಕ್ಕೆ ಅನುಕೂಲವಾಗುವಂತೆ ಸ್ಥಾಪಿಸಲಾಗುವುದು. ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು ಎಂದು ಘೋಷಣೆ ಮಾಡಿದರು.
ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟ
2023-2024 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ 7.5 ಬಡ್ಡಿ ನಿಗದಿಪಡಿಸಲಾಗಿದೆ.
ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಈ ಮೊದಲು 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು.
ಇನ್ನು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಘೋಷಿಸಿದ್ದಾರೆ.