ಪುತ್ತೂರು: ಅಂತರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆಗೆ ಪುತ್ತೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಹಾಗೂ ದೇಶದ ಪ್ರಥಮ ಸಹಕಾರಿ ಸಚಿವ ಅಮಿತ್ ಶಾ ರನ್ನು ಬೆಳ್ಳಿಯಿಂದ ಪೋಣಿಸಿದ ಅಡಿಕೆ ಹಾರ ಹಾಕಿ ಗೌರವಿಸಲಾಯಿತು.
ಫೆ.11 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ತುಳುನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿಶಿಷ್ಟ ಅಡಿಕೆ ಹಾರವನ್ನು ಶಾ ಅವರಿಗೆ ಅರ್ಪಿಸಲಾಯಿತು.
ಕಳೆದ ಕೃಷಿ ಯಂತ್ರ ಮೇಳದ ಸಮಯ ಮುಳಿಯ ಜ್ಯುವೆಲ್ಸ್ ಅಡಿಕೆಯ ಹಾರವನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡಿತ್ತು. ಊರಿನಲ್ಲಿ ಬೆಳೆದ ಸಿಂಗಾಪುರ ಅಡಿಕೆಗೆ ಬೆಳ್ಳಿಯ ಕವಚ ಹಾಕಿ ಮಾಲೆ ರಚಿಸಲಾಗಿತ್ತು.
41 ಗ್ರಾಂ ಬೆಳ್ಳಿ ಹಾಗೂ 54 ಅಡಿಕೆಯನ್ನು ಹೊಂದಿದ್ದ ಹಾರದ ಮೌಲ್ಯ ಸುಮಾರು 6500ರೂ. ಈ ಹಾರವನ್ನು ಕ್ಯಾಂಪ್ಕೊ ಖರೀದಿಸಿ ಷಾ ಅವರಿಗೆ ನೀಡಿದೆ. ಮುಳಿಯ ಜ್ಯುವೆಲ್ಸ್ ವಿಶೇಷತೆಗಳಲ್ಲಿ ಈ ಅಡಿಕೆಯ ಹಾರವೂ ಒಂದು ಎಂಬುದು ಮುಳಿಯ ಕೇಶವ ಭಟ್ ಅವರ ಮಾತಾಗಿದೆ.