ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಅಲ್ಯೂಮಿನಿಯಂ ಪಟ್ಟಿಗಳು ಜಾರಿ ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಅಲ್ಯೂಮಿನಿಯಂ ಪಟ್ಟಿಗಳನ್ನು ಹೊತ್ತ ಪಿಕಪ್ ಕಾರಿನ ಹಿಂದೆ ಇತ್ತು. ಎರಡೂ ವಾಹನಗಳು ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದವು. ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಬ್ರೇಕ್ ಹಾಕಿದಾಗ ಪಿಕಪ್‌ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ.
ಕಾರಿನಲ್ಲಿ ಚಾಲಕ ಮಾತ್ರವಿದ್ದರು. ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತಿವೆ. ಕಾರಿಗೆ ಹಾನಿಯಾಗಿದೆ. ಪಿಕಪ್ ವಾಹನ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.