ಉತ್ತರ ಕನ್ನಡ: ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.
ಹಾಡುವಳ್ಳಿ ಓಣಿಬಾಗಿಲು ನಿವಾಸಿ ಶಂಭು ಭಟ್ (70), ಪತ್ನಿ
ಮಾದೇವಿ ಭಟ್ (60), ಮಗ ರಾಜು ಭಟ್ (40) ಹಾಗೂ
ಸೊಸೆ ಕುಸುಮಾ ಭಟ್ (35) ಕೊಲೆಯಾದವರು.

ಕೊಲೆಗೆ ಕೌಟುಂಬಿಕ ಕಲಹವೇ ಕಾರಣವಾಗಿದ್ದು, ಹಿರಿಯ ಸೊಸೆಯ
ಕುಟುಂಬದವರು ಈ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾದ ಶಂಭು ಭಟ್‌ರಿಗೆ ಶ್ರೀಧರ್ ಭಟ್ ಎಂಬ ಮಗನಿದ್ದು ವಿದ್ಯಾ ಭಟ್ ಎನ್ನುವವರನ್ನು ಮದುವೆ ಆಗಿದ್ದ. ಇತ್ತಿಚಿಗೆ ಶ್ರೀಧರ್ ಭಟ್ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಶ್ರೀಧರ್ ಭಟ್ ನಿಧನರಾದ ಮೇಲೆ ಆಸ್ತಿ ವಿಚಾರಕ್ಕಾಗಿ ವಿದ್ಯಾ ಕುಟುಂಬಕ್ಕೂ ಹಾಗೂ ಶಂಭು ಭಟ್ ಕುಟುಂಬದ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಇದೇ ಕಾರಣಕ್ಕೆ ವಿದ್ಯಾ ಭಟ್ ಹಾಗೂ ಆಕೆಯ ತಂದೆ, ಸಹೋದರ ಶುಕ್ರವಾರ ಆಗಮಿಸಿ ನಾಲ್ವರನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಕೃತ್ಯ ನಡೆಯುವ ವೇಳೆ 10 ವರ್ಷದ ಮಗು ಪಕ್ಕದ ಮನೆಯಲ್ಲಿತ್ತು. 4 ವರ್ಷದ ಇನ್ನೊಂದು ಮಗು ಮಲಗಿದ್ದು, ಹೀಗಾಗಿ ಇವರಿಬ್ಬರು ಕೊಲೆಗಟುಕರಿಂದ ಪಾರಾಗಿದ್ದಾರೆ..