ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಬಸ್ ನಿಲ್ದಾಣ ಎಂದು ಕರೆಸಿಕೊಂಡಿರುವ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡುವ ಕಾರ್ಯ ಸದ್ಯದಲ್ಲೇ ಆಗಲಿದೆ. ಮಂಗಳೂರನ್ನು ಹೊರತುಪಡಿಸಿದರೆ ಪುತ್ತೂರು ಜಿಲ್ಲೆಯ ಪ್ರಧಾನ ಕೇಂದ್ರವಾಗಿರುವ ಕಾರಣ ಮತ್ತು ಪುತ್ತೂರು ಪರಿಸರದಲ್ಲೇ ಕೋಟಿ ಚೆನ್ನಯರ ಬದುಕಿನ ಘಟನಾವಳಿಗಳು ನಡೆದಿರುವ ಕಾರಣ ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವುದು ಸೂಕ್ತ ಎಂದು ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2019 ರಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದನೆ ನೀಡಿದ ಶಾಸಕ ಸಂಜೀವ ಮಠಂದೂರುರವರ ಸತತ ಪ್ರಯತ್ನದ ಫಲವಾಗಿ ಶೀಘ್ರದಲ್ಲೇ ನಾಮಕರಣ ಮಾಡಲು ಆದೇಶ ಬರಲಿದೆ ಎಂದು ತಿಳಿದು ಬಂದಿದೆ.
ನಗರ ಸಭೆಯಲ್ಲಿ ನಿರ್ಣಯ : ಕೋಟಿ ಚೆನ್ನಯರ ಹೆಸರು ಇಡುವ ಬಗ್ಗೆ ಶಾಸಕ ಸಂಜೀವ ಮಠಂದೂರುರವರು ವಿಶೇಷ ಮುತುವರ್ಜಿ ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್ ಚಂದ್ರಪ್ಪರವರಿಗೆ ಪತ್ರ ಬರೆದಿದ್ದರು ಅಲ್ಲದೆ ಈ ಬಗ್ಗೆ ಅವರಲ್ಲಿ ಮಾತನಾಡಿದಾಗ ನಗರ ಸಭೆಯಲ್ಲಿ ನಿರ್ಣಯ ಆಗಿ ಬಂದ ಮೇಲೆ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕಳೆದ ಬಾರಿ ನಗರಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿದ್ದು ನಿರ್ಣಯದ ಪ್ರತಿಯನ್ನು ಕೆಎಸ್‌ಆರ್‌ಟಿಸಿ ಚೆಯರ್‌ಮೆನ್‌ರವರಿಗೆ ಕಳುಹಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಕೂಡ ಒಪ್ಪಿಗೆ ನೀಡಿದ್ದು ನಗರಸಭೆಯ ನಿರ್ಣಯ ಬಂದ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದೀಗ ನಗರಸಭೆಯ ನಿರ್ಣಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕೈ ಸೇರಿದ್ದು ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ಶಾಸಕರು ತಿಳಿಸಿದ್ದಾರೆ.