ಬೆಂಗಳೂರು: 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ. ಉಗ್ರ ಹೋರಾಟ ನಡೆಸುತ್ತಿರುವ ನೌಕರರು ನಾವು ಯಾವುದೇ ಸಂಧಾನಕ್ಕೆ ಬಗ್ಗುವುದಿಲ್ಲ. ಎಸ್ಮಾ ಜಾರಿ ಆದ್ರೂ ನಾಳೆಯಿಂದ ಹೆದರುವುದಿಲ್ಲ. ಜೈಲಿಗೆ ಕಳಿಸಿದ್ರೂ ನಾವು ಜಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
10 ಲಕ್ಷ ನೌಕರರು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಿದ್ಧರಿದ್ದಾರೆ. ಈ ರೀತಿಯ ಮುಷ್ಕರ ಕಳೆದ 22 ವರ್ಷಗಳಿಂದ ನಡೆದಿಲ್ಲ. ಇದೇ ಮೊದಲ ಬಾರಿಗೆ ಬೃಹತ್ ಮಟ್ಟದ ಮುಷ್ಕರ ನಡೆಯಲಿದೆ.
9 ತಿಂಗಳ ಬಳಿಕ ವೇತನ ಆಯೋಗ ರಚನೆಯಾಗಿದೆ. ಆಗಲಿನಿಂದಲೂ ಚರ್ಚೆಯಲ್ಲಿದೆ. ಏನು ನಿರ್ಣಯಕ್ಕೆ ಬಂದಿಲ್ಲ. ಇಡೀ ದೇಶದಲ್ಲಿ ಕಡಿಮೆ ವೇತನ ಪಡೆಯುವವರು ಕರ್ನಾಟಕ ರಾಜ್ಯದವರು. ಬೇರೆ ರಾಜ್ಯಗಳಲ್ಲಿ ವೇತನ ಹೆಚ್ಚಾಗಿದೆ. ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.
ಪೌರಕಾರ್ಮಿಕರು ಇಂದೇ ತಮ್ಮ ಕೆಲಸವನ್ನು ಬಿಟ್ಟು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರು ರಸ್ತೆಯಲ್ಲೇ ಸಾಯುತ್ತೇವೆ. ಮನೆಗೆ ಹೋಗೋ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು 10 ಲಕ್ಷ ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ಹಾಗಿದ್ರೆ ನಾಳೆ ಯಾವೆಲ್ಲಾ ಇಲಾಖೆಗಳು ಬಂದ್ ಆಗಲಿವೆ ಅನ್ನೋ ಪಟ್ಟಿ ಇಲ್ಲಿದೆ..:
ನಾಳೆ ಯಾವೆಲ್ಲ ಇಲಾಖೆಗಳು ಬಂದ್
- ವಿಧಾನಸೌಧದ ಎಲ್ಲಾ ಕಚೇರಿಗಳು
- ಆರೋಗ್ಯ ಇಲಾಖೆ, ಕಂದಾಯ ಇಲಾಖೆ
- ಬಿಬಿಎಂಪಿಯ ಎಲ್ಲಾ ಕಚೇರಿ, ಆಸ್ಪತ್ರೆಗಳು
- ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ
- ಗ್ರಾಮ ಪಂಚಾಯತ್, ಸರ್ಕಾರಿ ಶಾಲೆಗಳು
- ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ
- ಪುರಸಭೆ, ಸರ್ಕಾರಿ ಹಾಸ್ಟೆಲ್‌ಗಳು
- ಪುರಸಭೆ, ತಾಲೂಕು ಕಚೇರಿ, ಜಿಲ್ಲಾ ಕಚೇರಿ
ನಾಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಇರುವುದಿಲ್ಲ. ನಾಳೆಯಿಂದ ಕೇವಲ ಎಮರ್ಜೆನ್ಸಿ ಸೇವೆಗಳು ಮಾತ್ರ ಸಿಗಲಿದೆ. ಅಪಘಾತ, ವಿಷ ಸೇವನೆ, ಡೆಲಿವರಿ, ಪೋಸ್ಟ್ ಮಾರ್ಟಮ್ ಸೇರಿ ಇತರೆ ಎಮರ್ಜೆನ್ಸಿ ಸೇವೆಗಳನ್ನು ಮಾತ್ರ ನಾವು ನೀಡಲಿದ್ದೇವೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ ಹೇಳಿದ್ದಾರೆ. ನಾಳೆ ಕೇವಲ ರುದ್ರಭೂಮಿ, ಹೆರಿಗೆ ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ..




























