ಬೆಂಗಳೂರು: ಸಿಎಂ ಬೊಮ್ಮಾಯಿ ಕೊಟ್ಟ ಭರವಸೆಯಂತೆ ಸರ್ಕಾರಿ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಿಎಂ ಸೂಚನೆ ಮೇರೆಗೆ ಮುಂದಿನ ತಿಂಗಳು ಏಪ್ರಿಲ್1 ರಿಂದ ಅನ್ವಯ ಆಗುವಂತೆ ನೌಕರರ ಸಂಬಳ ಹೆಚ್ಚಿಸುವ ಅಧಿಕೃತ ಆದೇಶ ಪ್ರಕಟಿಸಲಾಗಿದೆ.
ಸರ್ಕಾರದ ಆದೇಶದಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ. 1ನೇ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡಾ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಹಣಕಾಸು ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಇದರ ಅನ್ವಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿ ಬೋಧಕೇತರ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಅಧಿಕೃತ ಆದೇಶ ಹೊರಡಿಸಿದೆ.
ಮೂಲವೇತನವೆಂದರೆ ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ ಜೊತೆಗೆ ಹೆಚ್ಚುವರಿ ವೇತನ ಬಡ್ತಿ ಸೇರಿರುತ್ತದೆ. ಸರ್ಕಾರದ ಆದೇಶದಿಂದ ಮೂಲವೇತನದ ಶೇ.17ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಲು ತೀರ್ಮಾನಿಸಲಾಗಿದೆ..
ಶೇ.17 ರಷ್ಟು ವೇತನ ಹೆಚ್ಚಿಸುವ ಬಗ್ಗೆ ಆದೇಶ ಹೊರಡಿಸಿದ ಹಿನ್ನೆಲೆ ರಾಜ್ಯ ಸರಕಾರಿ ನೌಕರರ ಸಂಘ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದೆ ಎಂದು ತಿಳಿದು ಬಂದಿದೆ..