ವಿಟ್ಲ: ಡೊಂಬ ಹೆಗ್ಗಡೆ ಅರಸು ಮನೆತನಕ್ಕೆ ಸೇರಿದ 16 ದೇವಸ್ಥಾನಗಳಲ್ಲಿ ಒಂದಾದ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸಲಾಗಿದ್ದು, ಮಾ.8ರಿಂದ 13ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ಹೇಳಿದರು.

ಅರಮನೆಯ ಮುಂದಾಳುತ್ವದಲ್ಲಿ 1985ರಲ್ಲಿ ಬ್ರಹ್ಮಕಲಶ ನಡೆದಿದ್ದು, ಆ ಬಳಿಕ 2008ರಲ್ಲಿ 60ಲಕ್ಷ ವೆಚ್ಚದಲ್ಲಿ ವಿವಿಧ ಕಾರ್ಯಗಳನ್ನು ನಡೆಸಲಾಗಿತ್ತು. ಈಗ ಸುಮಾರು 2.25ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಸರ್ಕಾರದ ಕಡೆಯಿಂದ ಸುಮಾರು 30ಲಕ್ಷ ಅನುದಾನ ಲಭಿಸಿದೆ. ಸುತ್ತುಪೌಳಿ, ಗ್ರಾನೇಟ್ ಹಾಸು, ಹೊರಾಂಗಣ ಶಾಶ್ವತ ಛಾವಣಿ, ಶಿಲಾಕಲ್ಲಿನ ವಸಂತ ಮಂಟಪ ಸೇರಿ ವಿವಿಧ ಕಾರ್ಯಗಳನ್ನು ನಡೆಸಲಾಗಿದೆ ಎಂದು ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.8ರಂದು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅನ್ನಪೂರ್ಣ ಕಟ್ಟಡದ ಉದ್ಘಾಟನೆ, ಬೆಳಗ್ಗೆ ಉಗ್ರಾಣ ಮುಹೂರ್ತ ನಡೆಯಲಿದ್ದು, ಸಾಯಂಕಾಲ ಪರಿಯಲ್ತಡ್ಕ ಅಶ್ವಥಕಟ್ಟೆಯಿಂದ ಹಸಿರುವಾಣಿ ಹೊರೆಕಾಣಿಕೆ ನಡೆಯಲಿದೆ. 6 ದಿನಗಳಲ್ಲಿ ಸುಮಾರು 30ಸಾವಿರ ಜನ ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿ ದಲ್ಕಜೆಗುತ್ತು, ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಕೃಷ್ಣಯ್ಯ ಕೆ. ವಿಟ್ಲ ಉಪಸ್ಥಿತರಿದ್ದರು..