ಪುತ್ತೂರು: ಅಶೋಕ್ ರೈ ನನ್ನ ಪರಿಮಿತಿ ದಾಟಿದ್ದಾರೆ ಎಂದು ಪ್ರಭಾಕರ ಭಟ್ರು ಹೇಳ್ಬಹುದು….ಅದರ ವಿಚಾರ ಮತ್ತೆ ಅವ್ರಲ್ಲೇ ಹೇಳ್ತೇನೆ ಎಂದು ಕಾಂಗ್ರೆಸ್ ಮುಖಂಡ, ಪುತ್ತೂರು ವಿಧಾನ ಸಭಾ ಟಿಕೆಟ್ ಆಕಾಂಕ್ಷಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದ್ದಾರೆ.
ಅವರು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಶ್ರೀ ಕ್ಷೇತ್ರ ಪಡುಮಲೆಯ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದರು.
ಪಡುಮಲೆಯ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದ ಅವರು ‘ಯಾವುದೇ ಒಂದು ದೇವಸ್ಥಾನದಲ್ಲಿ ರಾಜಕೀಯ ಬರಬಾರದು, ದೇವಸ್ಥಾನಕ್ಕೆ ಬರುವಾಗ ನಾವು ಹೇಗೆ ಚಪ್ಪಲಿ ಹೊರಗಿಟ್ಟು ಬರುತ್ತೇವೊ ಹಾಗೆಯೇ ರಾಜಕೀಯವನ್ನು ಹೊರಗಡೆಯೇ ಬಿಟ್ಟು ದೇವಸ್ಥಾನದ ಕೆಲಸ ಕಾರ್ಯಗಳನ್ನು ಮಾಡಬೇಕು. ಆಗ ಮಾತ್ರ ಆ ದೇವಸ್ಥಾನದ ಕೆಲಸ ಬಹಳ ಸುಂದರವಾಗಿ ಮೂಡಿಬರುತ್ತದೆ.
ಬಹಳ ಸುಂದರವಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸಿದ ಜೀರ್ಣೋದ್ದಾರದ ಸಮಿತಿಯವರಿಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು ಎಂದರು.
ನಾನು ಬಹಳ ಸಮಯದಿಂದ ನೆನೆಯುತ್ತಿದ್ದೆ ಈ ದೇವಸ್ಥಾನದ ಜೀರ್ಣೋದ್ದಾರ ಆಗಬೇಕು ಎಂದು ಅದು ಇಂದು ಸಾರ್ಥಕವಾಗಿದೆ. ಈ ವಿಚಾರ ಬಹಳ ಸಂತೋಷವನ್ನು ನೀಡುತ್ತಿದೆ.
ಸರಕಾರದಿಂದ ದೇಣಿಗೆ ದೊರೆಯದಿದ್ದರೂ ಊರಿನವರು ಸೇರಿ ದೇವಸ್ಥಾನವನ್ನು ಹೇಗೆ ನಿರ್ಮಾಣ ಮಾಡಬಹುದು ಎಂಬುವುದಕ್ಕೆ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಬಹಳ ಜನ ನೆನೆಯುವರು ನಾವು ಬ್ರಹ್ಮಕಲಶ ಮಾಡಿ ಆಯಿತು, ದೇವರಿಗೆ ಬಹಳ ಹಣ ನೀಡಿದ್ದೇನೆ ಎಂದು, ಈ ವಿಚಾರವನ್ನು ಡಾ. ಪ್ರಭಾಕರ್ ಭಟ್ ಅವರು ಧಾರ್ಮಿಕ ಭಾಷಣದಲ್ಲಿ ಹೇಳಿರುವರು, ಅವರು ಮೊದಲಿನಿಂದ ಕಳಿಸಿದ ವಿಚಾರವೇ ನಮ್ಮಲ್ಲಿಯೂ ಇರುವುದು., ಆದ್ರೇ ಈಗ ಅವರು ಹೇಳಬಹುದು ನೀವು ನಮ್ಮ ಪರಿಮಿತಿಯನ್ನು ಮೀರಿದ್ದಿರಿ ಎಂದು….ಒಮ್ಮೊಮ್ಮೆ ಆಚೆ-ಈಚೆ ತಪ್ಪಿ ಹೋಗ ಬಹುದು ಅದನ್ನೆಲ್ಲಾ ಇಲ್ಲಿ ಮಾತನಾಡಲು ಆಗುವುದಿಲ್ಲ ನಾನು ಮತ್ತು ಅವರು ಈ ವಿಚಾರವನ್ನು ಮತ್ತೆ ಮಾತನಾಡುತ್ತೇವೆ ಎಂದರು.
ಹಾಗೆಯೇ ಭಾಷಣದ ಕೊನೆಯಲ್ಲಿ ಗೋವಿಂದ ಹಾಕಿದ ಅವರು ಈ ಭಾಗದ ಶನಿಗಳು ಎಲ್ಲಾ ದೂರವಾಗಲು ಎಲ್ಲರೂ ಜೋರಾಗಿ ದೇವರನ್ನು ನೆನೆದು ಗೋವಿಂದ ಹಾಕುವ ಅದು ಕಲ್ಲಡ್ಕಕ್ಕೆ ಕೇಳಬೇಕು.., ಕೇಳದಿದ್ದರೂ ಪರವಾಗಿಲ್ಲ ಪುತ್ತೂರಿಗೆ ಕೇಳಲಿ’ ಎಂದು ಹೇಳಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದರು.