ಮಂಗಳೂರು : ಸುರತ್ಕಲ್ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಪವನ್ ಎಂಬಾತನಿಗೆ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಮೂರನೇ ಆರೋಪಿಯಾಗಿರುವ ಪವನ್ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ದೀರ್ಘ ವಾದ ಪ್ರತಿವಾದದ ಬಳಿಕ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಜೋಷಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್ ಎಸ್ ಕೆ ಮತ್ತು ಹರ್ಷಿತ್ ಶಕ್ತಿನಗರ ವಾದಿಸಿದ್ದರು.
ಮಂಗಳೂರು ಹೊರವಲಯದ ಸುರತ್ಕಲ್ನ ಕಾಟಿಪಳ್ಳ ನಾಲ್ಕನೇ ಬ್ಲಾಕ್‌ನಲ್ಲಿ ಜಲೀಲ್(45) ಎಂಬವರನ್ನು ದುಷ್ಕರ್ಮಿಗಳು ಡಿ.24 ರಂದು ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದರು.
ಜಲೀಲ್ ಕಾಟಿಪಳ್ಳದ ನೈತಂಗಡಿ ರಸ್ತೆಯಲ್ಲಿರುವ ಲತೀಫಾ ಸ್ಟೋರ್ ಮಾಲಿಕರಾಗಿದ್ದರು. ಸ್ಟೋರ್ನಲ್ಲಿದ್ದ ಜಲೀಲ್ಗೆ ದುಷ್ಕರ್ಮಿಗಳ ಗುಂಪು ಇರಿದು ಪರಾರಿಯಾಗಿತ್ತು. ಗಾಯಾಳು ಜಲೀಲ್ರನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್ ಸಾವನ್ನಪ್ಪಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.