ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್‌ನ ಪಳ್ಳಿಯಬ್ಬ ಅವರನ್ನು ಹತ್ಯೆಗೈದ ಅಪರಾಧಿಗಳಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಲಾರ್‌ನ ಮೊಹಮ್ಮದ್ ಹಂಝ (47), ಅಝರುದ್ದೀನ್ ಅಲಿಯಾಸ್ ಅಝರ್ (29), ಸಜಿಪನಡು ಗ್ರಾಮದ ಅಮೀರ್ ಅಲಿಯಾಸ್ ಅಮ್ಮಿ (29), ಮೊಹಮ್ಮದ್ ಅರ್ಫಾಜ್ (23) ಮತ್ತು ಅತಾವುಲ್ಲ ಅಲಿಯಾಸ್ ಅಲ್ತಾಫ್(23) ಶಿಕ್ಷೆಗೊಳಗಾದವರು.
ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಪಳ್ಳಿಯಬ್ಬ ಅವರು 2020ರ ಅ.29ರಂದು ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಅಝರುದ್ದೀನ್‌ನ ರಿಕ್ಷಾದಲ್ಲಿ ಪಳ್ಳಿಯಬ್ಬ ಅವರು ಹಂಝ, ಅಮೀರ್, ಅರ್ಫಾಜ್ ಮತ್ತು ಅಲ್ತಾಫ್ ಅವರ ಜತೆ ಹೋಗಿರುವುದು ಗೊತ್ತಾಗಿತ್ತು. ಪಳ್ಳಿಯಬ್ಬ ಅವರು ಸಂಬಂಧಿ ಮಲಾರ್‌ನ ಹಂಝನಿಗೆ ಕೂಡ 72,000 ರೂ. ಸಾಲ ನೀಡಿದ್ದರು. ಅದನ್ನು ಆಗಾಗ್ಗೆ ವಾಪಸ್ ಕೇಳುತ್ತಿದ್ದರು. ಈ ಬಗ್ಗೆ ಅವರಿಬ್ಬರೊಳಗೆ ತಕರಾರು ಇತ್ತು. ಇದೇ ಕಾರಣಕ್ಕೆ ಹಂಝ ಇತರ ಅಪರಾಧಿಗಳ ಜತೆ ಸೇರಿಕೊಂಡು ಪಳ್ಳಿಯಬ್ಬ ಅವರನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಅಲ್ಕಿರುಪದವು ಎಂಬಲ್ಲಿರುವ ಗುಡ್ಡದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದು ಬೆಳಕಿಗೆ ಬಂದಿತ್ತು.
ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ಮಧುಸೂದನ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಶುಕ್ರವಾರ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಪಳ್ಳಿಯಬ್ಬ ಅವರ ಪುತ್ರಿಗೆ 3 ಲ.ರೂ. ಪರಿಹಾರ ನೀಡಲು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ಅವರು ವಾದ ಮಂಡಿಸಿದ್ದಾರೆ.



























