ಬಂಟ್ವಾಳ: ಜಮೀನಿನಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುವ ವಿಷಯವಾಗಿ ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿರುವ ಘಟನೆ ವಿಟ್ಲ ಸಮೀಪದ ಕರೋಪ್ಪಾಡಿ ಪಡ್ಪು ಎಂಬಲ್ಲಿ ನಡೆದಿದೆ.
ಕರೋಪಾಡಿ ಪಡ್ಪು ಆನೆಕಲ್ಲು ನಿವಾಸಿ ನಾರಾಯಣ ನಾಯ್ಕ್ (38) ಎಂಬವರು ನೀಡಿದ ದೂರಿನ ಮೇರೆಗೆ ಸುರೇಶ್, ಸುನೀಲ್, ರೋಹಿತ್, ಕೃಷ್ಣ ನಾಯ್ಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾರಾಯಣ ನಾಯ್ಕ್ ರವರ ಸಹೋದರರಾದ ಕುಶ ರವರ ಮನೆಗೆ ಸರ್ಕಾರದ ಬೆಳಕು ಯೋಜನೆಯಡಿ ವಿದ್ಯುತ್ ಲೈನ್ ರಾಮ ನಾಯ್ಕ್ ಎಂಬವರ ಜಮೀನಿನಲ್ಲಿ ಹಾದು ಹೋಗುವುದಕ್ಕೆ ಕೃಷ್ಣ ನಾಯ್ಕ್ ಹಾಗೂ ಮನೆಯವರು ಆಕ್ಷೇಪಿಸಿರುತ್ತಾರೆ. ಮಾ.13 ರಂದು ಸಂಜೆ ಕುಶ ರವರು ನೆರೆಯ ಗಣೇಶ್ ಎಂಬವರನ್ನು ಕುಳ್ಳಿರಿಕೊಂಡು ಔಷಧಿ ತರಲು ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿ ತಲುಪಿದಾಗ ಆಪಾದಿತರುಗಳಾದ ಸುರೇಶ್, ಸುನೀಲ್,ರೋಹಿತ್ ಹಾಗೂ ಕೃಷ್ಣ ನಾಯ್ಕ ರವರುಗಳು ಕುಶ ರವರ ಸ್ಕೂಟರನ್ನು ತಡೆದು ನಿಲ್ಲಿಸಿ ಕುಶನನ್ನು ಉದ್ದೇಶಿಸಿ “ನಮ್ಮ ಜಾಗದಲ್ಲಿ ಹೋಗಿರುವ ಕರೆಂಟು ಲೈನನ್ನು ತೆಗೆಯುವುದಿಲ್ಲಾ? ಎಂದು ಹೇಳಿ ಹಲ್ಲೆ ನಡೆಸಿ, ನೀವು ಕರೆಂಟ್ ಲೈನ್ ತೆಗೆಯದೆ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 341,323,324,506 ಜೊತೆಗೆ 34 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ.