ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.16 ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ.

ಪ್ರತಿ ವರ್ಷದಂತೆ ರಥ ಕಟ್ಟುವ ಸ್ಥಳವನ್ನು ಬಿಲ್ವಪತ್ರೆ ಭೂಸ್ಪರ್ಶ ಮಾಡುವ ಮೂಲಕ ಸೂಚಿಸುವಂತೆ ಈ ಬಾರಿಯೂ ಬಿಲ್ವಪತ್ರೆ ಭೂಸ್ಪರ್ಶ ಮಾಡಿದೆ.
ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ ಶೇಖರ್ ನಾರಾವಿ, ರವೀಂದ್ರನಾಥ ರೈ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ನೌಕರ ಉಮೇಶ್ ಬಲ್ನಾಡು ರವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.
ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಲಾಯಿತು.

ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು. ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಬಿ.ಕೆ. ವೀಣಾ, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ನಿತ್ಯ ಕರಸೇವಕ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
