ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ಇತ್ತು ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಂದಿರ ನಿರ್ಮಾಣ ವಿಚಾರಕ್ಕೆ ಹಿಂದೂ ಪರ ಸಂಘಟನೆ ಇಂದು ಗಣಹೋಮ ನೆರವೇರಿಸಿದೆ.
ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗಣಹೋಮ ನಡೆದಿದೆ. ಗಣಹೋಮದ ಮೂಲಕ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ.

ದರ್ಗಾವಿದ್ದ ಜಾಗದಲ್ಲಿ ತಂತ್ರಿಗಳು ಈ ಹಿಂದೆ ತಾಂಬೂಲ ಪ್ರಶ್ನೆ ನಡೆಸಿದ್ದರು. ತಾಂಬೂಲ ಪ್ರಶ್ನೆಯಲ್ಲಿ ದೇವಾಲಯ ನಿರ್ಮಾಣಕ್ಕೆ ದೇವರ ಅನುಗ್ರಹ ಬೇಕೆಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಮುಖಂಡರು 108 ಕಾಯಿಯ ಮಹಾ ಗಣಯಾಗ ನೆರವೇರಿಸಿದ್ದಾರೆ.

ವಿಹೆಚ್ಪಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಮಹಾ ಗಣಯಾಗ ನೆರವೇರಿಸಿದೆ. ಈ ಮಹಾ ಗಣಯಾಗದಲ್ಲಿ ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, ಹಿಂದೂ ಮುಖಂಡರಾದ ಶರಣ್ ಪಂಪ್ವೆಲ್ ಸೇರಿದಂತೆ ಹಲವು ಮಂದಿ ಹಿಂದೂ ಸಂಘಟನೆಗಳ ನಾಯಕರು ಭಾಗಿಯಾಗಿದ್ದರು.
ಏನಿದು ಮಳಲಿ ಮಸೀದಿ ವಿವಾದ ಪ್ರಕರಣ..!!??
ಮಂಗಳೂರು ತಾಲೂಕಿನ ಮಳಲಿ ಪ್ರದೇಶದಲ್ಲಿರುವ ಮಸೀದಿ ಒಳಗಡೆ ಮಂದಿರದ ರಚನೆ ಕಂಡು ಬಂದಿತ್ತು. ಮಸೀದಿ ನವೀಕರಣದ ವೇಳೆ ಮಂದಿರ ರಚನೆಯ ಕುರುಹು, ದೇವಸ್ಥಾನದ ಗರ್ಭ ಗುಡಿಯನ್ನು ಹೋಲುವ ರಚನೆ ಪತ್ತೆಯಾಗಿತ್ತು. ಇದಾದ ಬಳಿಕ ಈ ವಿಚಾರ ವಿವಾದಕ್ಕೆ ಕಾರಣವಾಯಿತು. ನ್ಯಾಯಾಲಯದ ಮೆಟ್ಟಿಲೇರಿತ್ತು.

ತಾಂಬೂಲ ಪ್ರಶ್ನೆಯ ಮೊರೆ ಹೋಗಿದ್ದ ಹಿಂದೂ ಸಂಘಟನೆಗಳು, ಕಳೆದ ಮೇ ತಿಂಗಳಿನಲ್ಲಿ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟರು. ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ನಡೆಸಲು ಸಲಹೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಗಿದೆ.
