ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಯುವುದಕ್ಕಾಗಿ ಹಾಗೂ ಇತರ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿ ಸಹಿತ ದ.ಕ. ಜಿಲ್ಲೆಯಾದ್ಯಂತ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸರು ಚುನಾವಣೆಗೆ ಸಂಬಂಧಿಸಿ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊಂದಿಕೊಂಡಿರುವ ಅಂತರ್‌ಜಿಲ್ಲಾ, ಅಂತರ್‌ರಾಜ್ಯ ಗಡಿಗಳಲ್ಲಿಯೂ ವಾಹನಗಳ ತಪಾಸಣೆ ಬಿಗಿಗೊಳಿಸಲಾಗಿದೆ.
ಮಂಗಳೂರು ನಗರದಲ್ಲಿರುವ 11 ಚೆಕ್‌ಪೋಸ್ಟ್‌ಗಳಲ್ಲಿ ನಿರಂತರವಾಗಿ ತಪಾಸಣೆ ನಡೆಯುತ್ತಿದೆ. ಅಲ್ಲದೆ ಕನಿಷ್ಠ 6 ಕಡೆಗಳಲ್ಲಿ ದಿಢೀರ್ ತಪಾಸಣೆ ನಡೆಸಲಾಗುತ್ತಿದೆ. 7 ಅಂತರ್‌ರಾಜ್ಯ ಚೆಕ್‌ಪೋಸ್ಟ್‌ಗಳಿದ್ದು, ಅಲ್ಲಿಯೂ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ವತಿಯಿಂದ 98 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇವುಗಳು ಕಾರ್ಯಾರಂಭ ಮಾಡಿವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆ, ಸಂಚಾರ ನಿಯಂತ್ರಣಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ..




























