ಬಂಟ್ವಾಳ: ತಾಲೂಕು ಅಮ್ಟೂರು ಗ್ರಾಮದ ಕರಿಂಗಾಣ ಅನಸೂಯಾ ವಾಸುದೇವ ನಾಯಕ್ ( 73) ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ನಿಧನರಾದರು.

ಅನಸೂಯಾ ರವರು ಜನಪ್ರಿಯ ಅಧ್ಯಾಪಕಿಯಾಗಿ ಕುಕ್ಕಾಜೆ, ಮೀನಾದಿ, ಮೊಗರ್ನಾಡು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಕುಕ್ಕಾಜೆ ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಭಾಲಾವಳಿಕಾರ್ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಜೀವ ಸದಸ್ಯೆಯಾಗಿ, ಮೋಂತಿಮಾರು ದುರ್ಗಾಪರಮೇಶ್ವರೀ ದೇವಾಲಯದ ಆಡಳಿತ ಮಂಡಳಿಯ ಸದಸ್ಯೆಯಾಗಿ, ಶ್ರೀದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಮತ್ತು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಗಳ ನೇತೃತ್ವ ವಹಿಸಿದ್ದು, ತಮ್ಮ ಪತಿಯೊಡಗೂಡಿ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೆ ಕೊಡುಗೈ ದಾನಿಯಾಗಿದ್ದರು.
ಭಾಲಾವಲಿ ಭಾಷೆಯಲ್ಲಿ ಹಾಗೂ ಕನ್ನಡದಲ್ಲಿ ಸುಮಾರು ಐನೂರಕ್ಕೂ ಹೆಚ್ಚಿನ ಚುಟುಕಗಳನ್ನು ಕವನಗಳನ್ನು ಲಘು ಪ್ರಹಸನ, ಲಲಿತ ಪ್ರಬಂಧಗಳನ್ನೂ ಬರೆದು ಕೆಲವನ್ನು ಪ್ರಕಟಗೊಳಿಸಿದ್ದರು.
ಮೃತರು ಮಗ, ಸೊಸೆ, ಮೊಮ್ಮಗ, ಮೊಮ್ಮಗಳು , ಇಬ್ಬರು ಸೋದರರು, ಇಬ್ಬರು ಸೋದರಿಯರು ಹಾಗೂ ಅಪಾರವಾದ ಶಿಷ್ಯ ವರ್ಗ ಮತ್ತು ಬಂಧುಗಳನ್ನು ಅಗಲಿದ್ದಾರೆ.


























