ಕಾಂಗ್ರೆಸ್ ಪಾಳಯ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಫೈನಲ್ ಮಾಡ್ತಿದ್ದಂತೆ ಇತ್ತ ಬಿಜೆಪಿ ಸರ್ವೆ ಸೂತ್ರದ ಮೊರೆ ಹೋಗಿದೆ. ಅಳೆದು ತೂಗಿ ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್ಗಳನ್ನ ಲೆಕ್ಕಹಾಕಿ, ಆರ್ಎಸ್ಎಸ್ ಮೂಲಕ ಕಾಂಗ್ರೆಸ್ಗೆ ಟಕ್ಕರ್ ನೀಡೋಕೆ ಬಿಜೆಪಿ ರಣತಂತ್ರವೊಂದನ್ನ ಹೆಣೆದಿದೆ.
ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಸೃಷ್ಠಿಸಿರೋ ಟಿಕೆಟ್ ಘೋಷಣೆ ಸದ್ಯ ಕೇಸರಿ ಪಾಳಯದಲ್ಲೂ ಕಿಡಿಯೊಂದನ್ನ ಹೊತ್ತಿಸಿದೆ. ಬಿಜೆಪಿಯ ಪಕ್ಷದ ಬ್ಯಾಕ್ ಬೋನ್ ಎಂದೇ ಕರೆಸಿಕೊಳ್ಳೋ ರಾಷ್ಟ್ರೀಯ ಸ್ವಂಯ ಸೇವಕ ಸಂಘ, 124 ಕ್ಷೇತ್ರಕ್ಕೆ ‘ಕೈ’ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗ್ತಿದ್ದಂತೆ ರಣತಂತ್ರವೊಂದನ್ನ ರೂಪಿಸಿದೆ. ಸೋಲು ಗೆಲುವಿನ ಲೆಕ್ಕವನ್ನ ಪಕ್ಕಾ ಮಾಡೋಕೆ ಕಲ್ಯಾಣ ಕರ್ನಾಟಕದತ್ತ ಚಿತ್ತ ನೆಟ್ಟಿದೆ.
ಅಳೆದು ತೂಗಿ ಕಾಂಗ್ರೆಸ್ ಪಾಳಯ 224 ಕ್ಷೇತ್ರಗಳ ಪೈಕಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಆಯ್ಕೆ ಸೂತ್ರಕ್ಕೆ ಮಾಸ್ಟರ್ ಸ್ಟ್ರೋಕ್ ನೀಡೋಕೆ ಬಿಜೆಪಿ ಗೇಮ್ ಪ್ಲಾನ್ ಒಂದನ್ನ ರೂಪಿಸಿದೆ. ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿರೋ ಮೊದಲ ಪಟ್ಟಿ ಮೇಲೆಯೇ ಆರ್ಎಸ್ಎಸ್ ಮೂಲಕ ಸರ್ವೆ ನಡೆಸಲು ಮುಂದಾಗಿದೆ. ಅಭ್ಯರ್ಥಿಗಳ ಫೈನಲ್‌ಗೂ ಮುನ್ನ ಅಖಂಡ ಬಳ್ಳಾರಿ ಮೂಲಕ ಸರ್ವೇ ಸೂತ್ರ ಅನುಸರಿಸಲು ಸಜ್ಜಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಅನ್ನ ಬಿಜೆಪಿ ಹೊಂದಿದೆ. ಹೀಗಾಗಿ ಈ ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಂದ ಬಿಜೆಪಿ ಕಲಿಗಳಿಗೆ ಎದುರಾಗುವ ಟಾಸ್ಕ್ ಬಗ್ಗೆ ಆರ್ಎಸ್ಎಸ್ ಮೂಲಕ ಸರ್ವೆ ನಡೆಯಲಿದೆ. ಹೈವೋಲ್ಟೇಜ್ ಕ್ಷೇತ್ರಗಳನ್ನ ಶತಯಗತಾಯ ಗೆಲ್ಲುವ ಗುರಿಯನ್ನ ಆರ್ಎಸ್ಎಸ್ ಹೊಂದಿದ್ದು, ಘೋಷಣೆ ಆಗಿರೋ ಕೈ ಅಭ್ಯರ್ಥಿಗಳು ಎಷ್ಟರ ಮಟ್ಟಿಗೆ ಪ್ರಬಲರು ಎಂಬ ಸತ್ಯಾಂಶವನ್ನ ಅರಿಯಲು ಮುಂದಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕ್ಷೇತ್ರದ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ, ಕ್ಷೇತ್ರವಾರು ಕಾಂಗ್ರೆಸ್ ಹೂಡುತ್ತಿರೋ ಗೆಲುವಿನ ಲೆಕ್ಕಾಚಾರ ಮಾಹಿತಿ ಕಲೆ ಹಾಕಲು ಪ್ಲಾನ್ ಮಾಡಿದೆ. ಇಷ್ಟೆಲ್ಲಾ ಮಾಹಿತಿ ಪಕ್ಕಾ ಆದ್ಮೇಲೆ ಎದುರಾಳಿ ಪ್ರಬಲವಾಗಿದ್ರೆ ಬಿಜೆಪಿ ಮಾಡಬೇಕಾದ ಟೀಂ ವರ್ಕ್ನ ಬಗ್ಗೆ ಮಾಹಿತಿ ಕಲೆ ಹಾಕಿ, ಬಿಜೆಪಿ ಮೇಲೆ ಅಭಿವೃದ್ಧಿ ಪರ ಇರೋ ಒಲವು ಹಾಗೂ ಕ್ಷೇತ್ರಕ್ಕೆ ಬೇಕಾದ ಯೋಜನೆಗಳ ಕುರಿತು ಪಟ್ಟಿ ಸಿದ್ದಪಡಿಸಿಕೊಳ್ಳಲಿದೆ. ಬಳಿಕ ಕಾಂಗ್ರೆಸ್ ಮಣಿಸಲು ಬಿಜೆಪಿ ರೂಪಿಸಬೇಕಾದ ಪ್ರಣಾಳಿಕೆ ರೆಡಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಇರೋ ಮತದಾರರಿಂದ ಮಾಹಿತಿ ಸಂಗ್ರಹಿಸಿ, ಕಾಂಗ್ರೆಸ್ ಎದುರಿಸಲು ಬಿಜೆಪಿ ರೂಪಿಸಬೇಕಾದ ಅಸ್ತ್ರಗಳ ಕುರಿತು ಮಾಸ್ಟರ್ ಪ್ಲಾನ್ ರೂಪಿಸಲಿದೆ.
ಶತಾಯಗತಾಯ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಗದ್ದುಗೆ ಏರಲು ಸಜ್ಜಾಗಿರೋ ಕೇಸರಿ ಪಾಳಯ ಕೈಗೆ ಟಕ್ಕರ್ ನೀಡೋಕೆ ಸರ್ವೆ ತಂತ್ರ ರೂಪಿಸಿದೆ. ಆರ್ಎಸ್ಎಸ್ ಮೂಲಕ ನಡೆಯಲಿರುವ ಈ ಸರ್ವೆ ಬಿಜೆಪಿ ಪಾಲಿಗೆ ವರವಾಗುತ್ತೋ ಅಥವಾ ಶಾಪವಾಗುತ್ತೋ ಅಂತ ಕಾದು ನೋಡಬೇಕಿದೆ..




























