ಪುತ್ತೂರು : ಕಾಲೇಜು ವಿದ್ಯಾರ್ಥಿಗಳ ಸಂಘ ಮತ್ತು ರಕ್ಷಕ-ಶಿಕ್ಷಕ ಸಂಘ ತಮ್ಮ ಬೇಡಿಕೆ ಈಡೇರಿಕೆಗಾಗಿ ಶಾಸಕರ ವಿರುದ್ಧ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿರುವ ಘಟನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲಿನಲ್ಲಿ ನಡೆದಿದೆ.

ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ರಕ್ಷಕ-ಶಿಕ್ಷಕ ಸಂಘ ಶಾಸಕರ ವಿರುದ್ಧ ಕಾಲೇಜು ಕ್ಯಾಂಪಸ್ ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
ಪುತ್ತೂರು-ಬೆದ್ರಾಳದವರೆಗೆ ರಸ್ತೆ ಅಗಲೀಕರಣ ಮಾಡುವುದು ಮತ್ತು ಬಸ್ ವ್ಯವಸ್ಥೆ ಕಲ್ಪಿಸುವುದು. ಇಲ್ಲವಾದಲ್ಲಿ ಕಾಲೇಜನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಕಾಲೇಜಿನಲ್ಲಿ 200ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ ಎಂಬ ಕಾರಣಕ್ಕೆ ಎರಡು ಹುದ್ದೆಗಳನ್ನು ಸ್ಥಳಾಂತರ ಮಾಡಲಾಗಿದೆ. ಅದನ್ನು ಮರಳಿ ನೀಡಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೆಚ್ಚುವರಿ ಮಾಡುವ ಉದ್ದೇಶದಿಂದ ಎಂಎ, ಎಂಕಾಂ ಮತ್ತು ಬಿಸಿಎ ಮೂರು ಕೋರ್ಸ್ ಪ್ರಾರಂಭಿಸಬೇಕು ಎನ್ನುವುದು ಪ್ರತಿಭಟನಾ ನಿರತರ ಮನವಿಯಾಗಿದೆ.

ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಇರುವಂತಹ ಈ ಕಾಲೇಜನ್ನು ಮುಚ್ಚಿಸುವಂತಹ ಹುನ್ನಾರ ನಡೆಯುತ್ತಿದೆ. ಸರಕಾರಿ ಕಾಲೇಜನ್ನು ಮುಚ್ಚಿಸುವಂತಹ ಪ್ರಯತ್ನ ನಡೆಯುತ್ತಿದ್ದರು ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಶಾಸಕರು ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಶೀಘ್ರ ಕ್ರಮಕೈಗೊಂಡು ಸಮಸ್ಯೆಗಳನ್ನು ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.





























