ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೋರ್ವನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾರ್ಜ್ ಮಾರ್ಟಿಸ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿಶಿರ್ ಬಂಧಿತ ಆರೋಪಿ.
ಈತನಿಂದ ಒಂದು ಪಿಸ್ತೂಲ್ ಮತ್ತು ಬುಲೆಟ್ ವಶಪಡಿಸಿಕೊಳ್ಳಲಾಗಿದೆ.
ತನ್ನ ಮನೆಯ ಒಂದು ಮಹಡಿಯಲ್ಲಿ ಸುಮಾರು ಐದು ತಿಂಗಳಿಂದ ಬಾಡಿಗೆ ಇದ್ದ ಶಿಶಿರ್ ಬಳಿ ಪಿಸ್ತೂಲ್ ಇರುವ ಬಗ್ಗೆ ಮನೆಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕದ್ರಿ ಪೊಲೀಸರು ಶಿಶಿರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪಿಸ್ತೂಲನ್ನು ತನ್ನ ಗೆಳೆಯ ನೀಡಿರುವುದಾಗಿ ಹೇಳಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ರಿ ಮಲ್ಲಿಕಟ್ಟೆಯಲ್ಲಿರುವ ಜಾರ್ಜ್ ಮಾರ್ಟೀಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಾಡಿಗೆಗೆ ವಾಸವಾಗಿರುವ ಶಿಶಿರ ಎಂಬುವವನ ಬಳಿ ಈ ಅಕ್ರಮ ಪಿಸ್ತೂಲ್ ಪತ್ತೆಯಾಗಿದೆ. ಈ ಬಗ್ಗೆ ಶಿಶಿರನನ್ನು ತನಿಖೆಗೊಳಪಡಿಸಿದಾಗ ಆ್ಯಂಡ್ರೂ ರೊಡ್ರಿಗಸ್ ಎಂಬಾತ ಈ ಪಿಸ್ತೂಲನ್ನು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ.
ಆ್ಯಂಡ್ರೂ ರೊಡ್ರಿಗಸ್ 2014ರಲ್ಲಿ ನಗರದ ಹಂಪನಕಟ್ಟೆಯಲ್ಲಿ ನಡೆದ ಕುಮಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಂದಿನಿಂದ ಕೊಲೆ ಆರೋಪಿ ಆ್ಯಂಡ್ರೂ ರೊಡ್ರಿಗಸ್ ತಲೆಮರೆಸಿಕೊಂಡಿದ್ದ, ಈ ಹಿನ್ನೆಲೆ ಲುಕ್‌ಔಟ್ ನೊಟೀಸ್ ಜಾರಿಮಾಡಲಾಗಿತ್ತು.
ಈ ವೇಳೆ ಆತನನ್ನು ಗೋವಾ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ಅಲ್ಲಿನ ಪೊಲೀಸರು ಅವನನ್ನು ಬಂಧಿಸಿ ಬಳಿಕ ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಈತ ನ್ಯಾಯಾಲಯದಿಂದ ಜಾಮೀನು ಪಡೆದು ಮತ್ತೆ ತಲೆಮರೆಸಿಕೊಂಡಿದ್ದಾನೆ.
ಸದ್ಯ ಪೊಲೀಸ್ ವಶದಲ್ಲಿರುವ ಶಿಶಿರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದೇ ವೇಳೆ ಪಿಸ್ತೂಲ್‌ನಲ್ಲಿ ಒಂದು ಜೀವಂತ ಬುಲೆಟ್ ಪತ್ತೆಯಾಗಿದೆ. ಈತನ ಉದ್ದೇಶ ಏನಿತ್ತು.? ಎಂಬುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


























