ವಿಧಾನ ಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯು ಈಗಾಗಲೇ ಬಿಡುಗಡೆಗೊಂಡಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ಎ.7 ಅಥವಾ 8 ರಂದು ಬಿಡುಗಡೆಗೊಳ್ಳುವ ಸಂಭವವಿದೆ. ಆದರೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೊಂದು ಹರಿದಾಡುತ್ತಿದ್ದು, ಅದು ನಿಜವಾದ ಪಟ್ಟಿಯಲ್ಲವೆಂದು ಭಾರತೀಯ ಜನತಾ ಪಾರ್ಟಿ ಮಾಹಿತಿ ನೀಡಿದೆ.
ಭಾರತೀಯ ಜನತಾ ಪಾರ್ಟಿಯು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ‘ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯು ‘ಫೇಕ್’ ಎಂದು ತಿಳಿಸಿದೆ.
ಅಷ್ಟೇ ಅಲ್ಲದೇ ಈ ಸುಳ್ಳು ಪಟ್ಟಿಯ ಹೊಣೆಯನ್ನು ಬಿಜೆಪಿ ನೇರವಾಗಿ ಕಾಂಗ್ರೆಸ್ ಮೇಲೆ ಹಾಕಿದ್ದು, ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು ಎಂದು ಕಿಡಿಕಾರಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಟಿಕೆಟ್ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆ ಆಗಿದೆ. ಇಂದು, ನಾಳೆ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏ.8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.



























