ತುಳುನಾಡಿನ ಪ್ರತಿಷ್ಠಿತ ಯಕ್ಷಗಾನ ಮೇಳವಾದ ಸಸಿಹಿತ್ಲು ಶ್ರೀ ಭಗವತೀ ಮೇಳದ ಬಹುಮುಖ ಪ್ರತಿಭಾವಂತ ಕಲಾವಿದ ನಲ್ಕ ಜಗದೀಶ್ ( 56 )ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾಸರಗೋಡು ತಾಲೂಕಿನ ನಲ್ಕ ಎಂಬಲ್ಲಿ ಜನಿಸಿದ ಜಗದೀಶರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸತ್ಯನಾರಾಯಣ ಹೈಸ್ಕೂಲ್ ಪೆರ್ಲ ಇದರಲ್ಲಿ ಪೂರೈಸಿ ಜೊತೆಯಲ್ಲಿ ಸಬ್ಬಣ ಕೊಡಿ ರಾಮಭಟ್ಟರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ಮುಂದೆ ಹವ್ಯಾಸಿ ಕಲಾವಿದರಾಗಿ ಊರಿನ ಹೆಮ್ಮೆಗೆ ಪಾತ್ರರಾಗಿದ್ದರು.
ಎಳವೆಯಲ್ಲಿಯೇ ಯಕ್ಷಗಾನ, ನಾಟಕ, ಹರಿಕಥೆ, ಏಕಪಾತ್ರ ಅಭಿನಯ ಮುಂತಾದ ಹಲವು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪುಗೊಂಡು ಹಲವಾರು ವರ್ಷಗಳಿಂದ ಸಸಿಹಿತ್ಲು ಭಗವತೀ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.
ಸಸಿಹಿತ್ಲು ಮೇಳದಲ್ಲಿ ಹೆಚ್ಚಾಗಿ ಕಥಾನಾಯಕನ ಪಾತ್ರ ನಿರ್ವಹಿಸುತಿದ್ದರು. ಪೋಷಕ ಪಾತ್ರದಲ್ಲೂ ಸೈ ಎನಿಸಿಕೊಂಡವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರ ನಿರ್ವಹಿಸುತಿದ್ದರು.
ಮೃತರು ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು ಮತ್ತು ಗಂಡು ಮಗುವನ್ನು ಅಗಲಿದ್ದಾರೆ.

























