ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಕರ್ನಾಟಕ ಕಂಡ 14ನೇ ಮುಖ್ಯಮಂತ್ರಿ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನವರಾದ ಇವರು, ತುಳುಗೌಡ ಕುಟುಂಬದಲ್ಲಿ ಜನಿಸಿದವರು. ರಾಜ್ಯ ಹಾಗೂ ಕೇಂದ್ರದ ಮಂತ್ರಿಯಾಗಿ ಹಲವಾರು ಜವಾಬ್ದಾರಿಯುತ ಸೇವೆಗಳನ್ನು ಸಲ್ಲಿಸಿದ್ದಾರೆ.
ಸದ್ಯ ಗೌಡರು ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದಾರೆ. ಖಾಸಗಿ ಚಾನಲ್ ನ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಕೆಲವು ವಿಶೇಷ ಸಂಗತಿಗಳನ್ನು ಸ್ಮರಿಸಿಕೊಂಡರು.
ಡಿವಿಎಸ್ ಶಾಲಾ ದಿನಗಳು ಹೇಗಿದ್ದವು..!??
6 ಮತ್ತು 7ನೇ ತರಗತಿಯಲ್ಲಿ ಓದುವಾಗ ದಿವಂಗತ ಮುತ್ತಪ್ಪ ರೈ ಹಾಗೂ ಸದಾನಂದ ಗೌಡರು ಒಂದೇ ಕ್ಲಾಸ್ಮೆಟ್ ಆಗಿದ್ದರು. ನಂತರ ಕಾಲೇಜಿನ ಮೆಟ್ಟಿಲು ಹತ್ತಿದಾಗ ಸದಾನಂದ ಗೌಡರು ವಿಜ್ಞಾನ ವಿಷಯ ತೆಗೆದುಕೊಂಡರೆ, ಮುತ್ತಪ್ಪ ರೈ ಕಲಾ ವಿಭಾಗ ಆಯ್ಕೆ ಮಾಡಿಕೊಂಡರಂತೆ. ಇಬ್ಬರಲ್ಲೂ ಒಳ್ಳೆತನವೆ ಇತ್ತು. ಆದರೆ ಅವರು ಅಪ್ಪಟ ಕಾಂಗ್ರೆಸ್ಸಿಗ, ನಾನು ಬಿಜೆಪಿಗ. ಹೀಗಾಗಿ ಯಾವಾಗಲೂ ಫೈಟ್ ಆಗುತ್ತಿತ್ತು ಎಂದು ರೈ ಬಗ್ಗೆ ಒಂದಷ್ಟು ವಿಚಾರಗಳನ್ನು ಬಿಚ್ಚಿಟ್ಟರು.
ಸಣ್ಣ-ಸಣ್ಣ ವೆಪನ್ಸ್ ಇಟ್ಕೊಳ್ತಿದ್ದೆ..!!
ನಮ್ಮಿಬ್ಬರ ಮಧ್ಯೆ ಯಾವಾಗೂ ಫೈಟ್ ನಡೆಯುತ್ತಿತ್ತು. ದೊಣ್ಣೆ, ಕತ್ತಿ.. ನಾನು ಕೂಡ ಹಾಗೆಯೇ ಇದ್ದೆ. ಕಾಲೇಜಿಗೆ ಹೋಗುವಾಗ ಬೆಲ್ಟ್ ಹಾಕಿ ಇನ್ಶರ್ಟ್ ಮಾಡಿಕೊಳ್ತಿದ್ದೆ. ಸಣ್ಣ-ಸಣ್ಣ ವೆಪನ್ಸ್ ತೆಗೆದುಕೊಂಡು ಹೋಗ್ತಿದ್ದೆ. ಈಗ ನಾನು ಆ ರೀತಿ ಇಲ್ಲ.
ನಂತರದ ದಿನಗಳಲ್ಲಿ ರೈ ಕಾರ್ಯಕ್ಷೇತ್ರಗಳು ಬೇರೆಯಾದವರು. ಅವರು ವಿಜಯ ಬ್ಯಾಂಕ್ ಸೇರಿದ ಮೇಲೆ ಬೇರೆ ಬೇರೆ ಘಟನೆಗಳು ನಡೆದವು. ಅವರ ವಿರುದ್ಧ ಬೇರೆ ಬೇರೆ ಕೇಸ್ಗಳು ದಾಖಲಾದವು. ಮುಂಬೈನಲ್ಲೂ ಕೇಸ್ ದಾಖಲಾಯಿತು. ಮತ್ತಪ್ಪ ರೈ ವಿರುದ್ಧ ಮುಂಬೈನಲ್ಲಿ ಕೇಸ್ ಆದ ಸಂದರ್ಭದಲ್ಲಿ ನಾನು ನನ್ನ ಮಾವನ ಮನೆಯಲ್ಲಿದ್ದೆ. ಪೊಲೀಸರು ಮುತ್ತಪ್ಪ ರೈನನ್ನು ಬಂಧಿಸಲು ಬಂದಾಗ ಅವರನ್ನು ನಾನು ಮಾವನ ಮನೆಯಲ್ಲಿ ಇಟ್ಟುಕೊಂಡಿದ್ದೆ. ಅವರ ಪರ ವಕಾಲತ್ತು ಕೊಡಿಸಿ, ರಿಲೀಸ್ ಮಾಡಿಸುವ ಕೆಲಸವನ್ನು ನಾನು ಮಾಡಿದ್ದೆ. ನಾನು ಅವರನ್ನು ಬಿಡಿಸಲು ಬೆಂಬಲ ಕೂಡ ನೀಡಿದ್ದೆ.
ನಾನು ಮುಖ್ಯಮಂತ್ರಿಯಾದಾಗ ಅವರು ನನ್ನ ಮನೆಗೆ ಬಂದು ಉಂಗುರ ತೊಡಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಇಬ್ಬರ ಮಧ್ಯೆ ಭಾರೀ ಗಲಾಟೆಗಳು ನಡೆಯುತ್ತಿದ್ದವು. ಆದರೆ ನಮ್ಮಿಬ್ಬರ ಮಧ್ಯೆ ಯಾವತ್ತೂ ದ್ವೇಷ ಬಂದಿರಲಿಲ್ಲ. ಅವರ ಪತ್ನಿ ಸತ್ತಾಗ ನಾನು ಅಲ್ಲಿಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದೆ ಎಂದು ಅಂದಿನ ದಿನಗಳನ್ನು ಸದಾನಂದ ಗೌಡ ಸ್ಮರಿಸಿದರು.


























