ಬಂಟ್ವಾಳ : ಬೈಕ್ ಪ್ರಪಾತಕ್ಕೆ ಬಿದ್ದು ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಯುವಕ ಮೃತಪಟ್ಟ ಘಟನೆ ಇಂದು ಮುಂಜಾನೆ ಬಿಸಿರೋಡಿನಲ್ಲಿ ನಡೆದಿದೆ.
ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಯಶೋಧರ (25) ಎಂದು ಗುರುತಿಸಲಾಗಿದೆ.
ಬೈಕ್ ಚಲಾಯಿಸುತ್ತಿದ್ದ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾರೆ.
ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು, ಬೆಳ್ತಂಗಡಿಯಲ್ಲಿ ಸ್ನೇಹಿತನ ಮನೆಯಲ್ಲಿ ನಡೆಯುವ ಕೋಲಕ್ಕೆ ಹೋಗಿ ಅಲ್ಲಿಂದ ಸುಮಾರು 3.30 ಗಂಟೆ ವೇಳೆಗೆ ಬರುತ್ತಿರುವಾಗ ಬಿಸಿರೋಡಿನ ಕೈಕಂಬ ಸಮೀಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋದ ಬಳಿ ಬೈಕ್ ಸುಮಾರು ಹತ್ತಕ್ಕೂ ಅಧಿಕ ಅಡಿ ಇರುವ ಆಳಕ್ಕೆ ಉರುಳಿ ಬಿದ್ದಿದೆ.
ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

























