ಮಾಣಿ : ಬಾನೊಟ್ಟು ಶ್ರೀ ಉಮಾಮಹೇಶ್ವರ ಸಾನ್ನಿಧ್ಯದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನದ ಅಂಗವಾಗಿ ಅಖಂಡ- ಏಕಾಹ ಭಜನಾ ಕಾರ್ಯಕ್ರಮ ಎಪ್ರಿಲ್8 ನೇ ಸೂರ್ಯೋದಯದಿಂದ ಎಪ್ರಿಲ್9 ರ ಸೂರ್ಯೋದಯದವರೆಗೆ ಊರ-ಪರವೂರ ವಿವಿಧ ಭಜನಾ ತಂಡಗಳ ಸಮ್ಮಿಲನದಲ್ಲಿ ಅದ್ದೂರಿಯಾಗಿ ಜರುಗಿತು.

ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಪ್ರಜ್ವಲನಗೊಳಿಸುವ ಮೂಲಕ ಈ ಅಖಂಡ ಏಕಾಹ ಭಜನಾ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ರೈ ಪೆರ್ಲಬೀಡು, ಪ್ರಮುಖರಾದ ಎನ್ .ರವಿಶರ್ಮ, ಸದಾಶಿವ ಆಚಾರ್ಯ, ವೈದಿಕರಾದ ಪಳನೀರು ಅನಂತ ಭಟ್ ಹಾಗೂ ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯರು, ಮಹಿಳಾ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಊರ – ಪರವೂರಿನ ಭಕ್ತರು ಉಪಸ್ಥಿತರಿದ್ದರು.

ದೇವಾಲಯ ಜೀರ್ಣೋದ್ಧಾರ ಕುರಿತಾಗಿ ಜರುಗಿದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪರಿಹಾರ ಹಾಗೂ ನಿವೃತ್ತಿಯ ಭಾಗವಾಗಿ, ಗ್ರಾಮದ ಸುಬೀಕ್ಷೇಗಾಗಿ ಕ್ಷೇತ್ರ ಅಭಿವೃದ್ಧಿ ಸಮಿತಿ ಅಖಂಡ ಏಕಾಹ ಭಜನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು, 20ಕ್ಕೂ ಹೆಚ್ಚು ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು.

ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಕಾರ್ಯಕ್ರಮಕ್ಕೆ ಹಲವು ಮಂದಿ ಪ್ರಮುಖರು ಆಗಮಿಸಿದ್ದರು.

ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಯವರು ಹಾಗೂ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಶುಭಾರಂಭಗೊಂಡ ಬಾನೊಟ್ಟು ಅಖಂಡ ಏಕಾಹ ಭಜನೆ ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯರ ಭಜನೆಯ ಮೂಲಕ ಮಂಗಳಾಚರಣೆ ಕಾಣುವ ಮೂಲಕ ಬಾನೊಟ್ಟು ಅಖಂಡ ಏಕಾಹ ಭಜನೆ ಸಂಪನ್ನಗೊಂಡಿತು.




























